ಮುಂಬೈ, ಸೆ 15 (DaijiworldNews/PY): ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ವರದಿ ಮಾಡುವುದಕ್ಕೆ ನಿರ್ಬಧ ಹೇರಬೇಕು ಎಂದು ಕೋರಿ ಎನ್ಜಿಓ ಅರ್ಜಿ ಸಲ್ಲಿಸಿದ್ದು, ಮಂಗಳವಾರ ಕೇಂದ್ರಕ್ಕೆ ಬಾಂಬೆ ಹೈಕೋರ್ಟ್ ನೋಟಿಸ್ ನೀಡಿದೆ.
ಈ ಬಗ್ಗೆ ಈಗಾಗಲೇ ಪುಣೆ ಮೂಲದ ಚಿತ್ರ ನಿರ್ಮಾಪಕ ನೀಲೇಶ್ ನಾವಲಖಾ ಮತ್ತು ಇತರೆ ಮೂರು ಮಂದಿ ಹಾಗೂ ಮಹಾರಾಷ್ಟ್ರದ ಎಂಟು ಮಂದಿ ನಿವೃತ್ತ ಪೊಲೀಸ್ ಅಧಿಕಾರಿಗಳು ಪ್ರತ್ಯೇಕವಾದ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಅಕ್ಟೋಬರ್ 8ರಂದು ಈ ವಿಚಾರವಾಗಿ ಮುಖ್ಯ ನ್ಯಾಯಾಧೀಶ ದೀಪಾಂಕರ್ ದತ್ತ ಅವರನ್ನೊಳಗೊಂಡ ಪೀಠವು ಮೂರು ಮಂದಿ ಸಲ್ಲಿಸಿದ ಅರ್ಜಿಗಳನ್ನು ವಿಚಾರಣೆ ನಡೆಸಲು ತೀರ್ಮಾನ ಕೈಗೊಂಡಿದ್ದಾರೆ.
ಇನ್ನು ಈ ಅರ್ಜಿ ವಿಚಾರಣೆಯಾಗುವ ತನಕ ಮಾಧ್ಯಮಗಳು ಸುಶಾಂತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯಾದ ಸುದ್ದಿ ಮಾಡದಂತೆ ತಡೆಯಬೇಕು ಎಂದು ಇನ್ ಪರ್ಸ್ಯೂಟ್ ಆಫ್ ಜಸ್ಟೀಸ್ ಸ್ವಯಂ ಸೇವಾ ಸಂಸ್ಥೆ ಮನವಿ ಮಾಡಿದೆ.
ಸುಶಾಂತ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಹೊರಬೀಳುವ ಮೊದಲು ಆರೋಪಿಯನ್ನು ಕೊಲೆಗಾರ್ತಿ, ಗೋಲ್ಡ್ ಡಿಗ್ಗರ್ ಎಂದು ಹೇಳಲಾಗುತ್ತಿದ್ದು, ಈ ಕಾರಣದಿಂದ ಪ್ರಕರಣದ ತನಿಖೆಗೆ ತೊಂದರೆಯಾಗಬಹುದು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.