ನವದೆಹಲಿ, ಸೆ 15 (DaijiworldNews/PY): ಚೀನಾ ಸೇನೆಯು ಪೂರ್ವ ಲಡಾಖ್ ಗಡಿಯಲ್ಲಿ ಹೆಚ್ಚುವರಿ ಸೈನ್ಯವನ್ನು ನಿಯೋಜನೆ ಮಾಡಿದೆ. ಭಾರತೀಯ ಸೈನ್ಯವು ಈ ಪರಿಸ್ಥಿತಿಯನ್ನು ನಿಭಾಯಿಸಲು ಬದ್ದವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಈ ಬಗ್ಗೆ ಲೋಕಸಭೆಗೆ ಮಾಹಿತಿ ನೀಡಿರುವ ಅವರು, ಜೂನ್ 15 ರಂದು ಗಾಲ್ವಾನ್ನಲ್ಲಿ ನಡೆದ ಸಂಘರ್ಷದಲ್ಲಿ ಚೀನಾವು ಹಿಂಸಾತ್ಮಕ ಸಂಘರ್ಷದ ಪರಿಸ್ಥಿತಿ ಉಂಟುಮಾಡಿತ್ತು. ಈ ವೇಳೆ ನಮ್ಮ ಸೈನಿಕರು ಪ್ರಾಣ ತ್ಯಾಗ ಮಾಡಿದರು. ಚೀನಾ ಸೈನ್ಯದ ದಾಳಿಗೆ ಪ್ರತ್ಯುತ್ತರ ನೀಡಲು ಸೈನ್ಯವನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಗಡಿಯ ವಿಚಾರಕ್ಕೆ ಸಂಬಂಧಿಸಿದಂತೆ ನಿರೀಕ್ಷಿತ ಪರಿಹಾರ ದೊರಕಿಲ್ಲ. ಅಲ್ಲದೇ, ಚೀನಾವು ಭಾರತದ ಬೇಡಿಕೆಗೆ ಒಪ್ಪಿಗೆ ನೀಡಿಲ್ಲ. ಚೀನಾ ಸೇನೆಯು ದಾಳಿ ಮಾಡಿ ತನ್ನ ಹಳೆಯ ಒಪ್ಪಂದವನ್ನು ಉಲ್ಲಂಘನೆ ಮಾಡಿದೆ ಎಂದಿದ್ದಾರೆ.
ನಮ್ಮ ಸೈನಿಕರ ಉತ್ಸಾಹ ಸಂಕಷ್ಟದ ಸಂದರ್ಭ ಕುಂದಲಿಲ್ಲ. ಪ್ರಧಾನಿ ಮೋದಿ ಅವರು ಗಡಿಗೆ ಭೇಟಿ ನೀಡಿದ್ದ ಸಂದರ್ಭ ಇಡೀ ದೇಶದ ಜನರು ಸೈನಿಕರೊಂದಿಗಿದ್ದಾರೆ ಎಂದು ಹೇಳಿದ್ದಾರೆ. ಈ ಹಿನ್ನೆಲೆ ನಮ್ಮ ಸೈನಿಕರ ಹುಮ್ಮಸ್ಸು ಇನ್ನು ಹೆಚ್ಚಿದೆ ಎಂದು ಸೈನಿಕರ ಕಾರ್ಯವನ್ನು ಹೊಗಳಿದ್ದಾರೆ.