ಲಖನೌ, ಸೆ. 16 (DaijiworldNews/MB) : ಆಗ್ರಾದಲ್ಲಿ ನಿರ್ಮಾಣವಾಗುತ್ತಿರುವ 'ಮೊಘಲ್ ಮ್ಯೂಸಿಯಂ'ಗೆ ಶಿವಾಜಿ ಮಹಾರಾಜರ ಹೆಸರಡಲು ಉತ್ತರ ಪ್ರದೇಶ ಸರ್ಕಾರ ಈಗಾಗಲೇ ನಿರ್ಧರಿಸಿದ್ದು ಇದೀಗ ಯಮುನಾ ನದಿ ತಟದಲ್ಲಿರುವ ವಿಶ್ವ ಪ್ರಸಿದ್ದ ತಾಜ್ ಮಹಲ್ನ ಹೆಸರನ್ನು ತೇಜೊಲಯ್ ಅಥವಾ ತೇಜೊಮಹಲ್ ಎಂದು ಮರುನಾಮಕರಣ ಮಾಡಬೇಕು ಎಂದು ಕೆಲವು ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ಉತ್ತರ ಪ್ರದೇಶ ಬಿಜೆಪಿಯ ಹಿರಿಯ ನಾಯಕ ವಿನಯ್ ಕಟಿಯಾರ್ ಅವರು, ''ತಾಜ್ ಮಹಲ್ ಶಿವನ ದೇವಾಲಯವಾಗಿದ್ದು ಈ ಕಾರಣದಿಂದಾಗಿ ಅದರ ಹೆಸರನ್ನು ತೇಜೊಲಯ್ ಎಂದು ಬದಲಿಸಬೇಕು'' ಎಂದು ಆಗ್ರಹಿಸಿದ್ದಾರೆ.
ಬಿಜೆಪಿಯ ಮತ್ತೋರ್ವ ನಾಯಕ, ಉತ್ತರ ಪ್ರದೇಶ ಗೋ ಸೇವಾ ಆಯೋಗದ ಸದಸ್ಯರೂ ಆಗಿರುವ ಭೋಲೇ ಸಿಂಗ್ ಅವರು, ''ಯಾವುದೇ ವಿಳಂಬ ಮಾಡದೆ ತಾಜ್ ಮಹಲ್ಗೆ ತೇಜೋಲಯ್ ಎಂದು ಮರು ನಾಮಕರಣ ಮಾಡಬೇಕು'' ಎಂದು ಒತ್ತಾಯಿಸಿದ್ದಾರೆ.
ಇನ್ನು ಈಗಾಗಲೇ ಆಗ್ರಾದಲ್ಲಿ ನಿರ್ಮಾಣವಾಗುತ್ತಿರುವ 'ಮೊಘಲ್ ಮ್ಯೂಸಿಯಂ'ಗೆ ಶಿವಾಜಿ ಮಹಾರಾಜರ ಹೆಸರಿಡಲು ಉತ್ತರ ಪ್ರದೇಶ ಸರ್ಕಾರ ತೀರ್ಮಾನಿಸಿದ್ದು, ''ಮೊಘಲರು ನಮ್ಮ ಹಿರೋಗಳಾಗಲು ಸಾಧ್ಯವಿಲ್ಲ. ಶಿವಾಜಿಯೇ ನಮ್ಮ ನಿಜವಾದ ಹಿರೋ. ಅವರ ಹೆಸರು ಕೇಳಿದಾಗ ದೇಶ ಪ್ರೇಮ ಮೂಡುತ್ತದೆ'' ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.
ಈ ಮ್ಯೂಸಿಯಂ ಆರಂಭದ ಯೋಜನೆ 2016ರಲ್ಲಿ ಆರಂಭವಾಗಿದ್ದು, ''ಈ ಮ್ಯೂಸಿಯಂನಲ್ಲಿ ಮೊಘಲ್ ಮತ್ತು ಬ್ರಜ್ ಕಾಲದ ವಸ್ತುಗಳನ್ನು ಸಂಗ್ರಹಿಸಿಡಲಾಗುತ್ತದೆ. ಮೊಘಲರ ವಸ್ತು ಸಂಗ್ರಹಾಲಯಕ್ಕೆ ಶಿವಾಜಿ ಹೆಸರು ಇಡುವುದು ಹೇಗೆ ಸರಿ'' ಎಂದು ಕಾಂಗ್ರೆಸ್ ನಾಯಕರು ಹಾಗೂ ಸಮಾಜವಾದಿ ಪಕ್ಷದ ನಾಯಕರು ಲೇವಡಿ ಮಾಡಿದ್ದಾರೆ.