ನವದೆಹಲಿ, ಸೆ. 16 (DaijiworldNews/MB) : ಕೇಂದ್ರ ಸರ್ಕಾರದ ಅಗತ್ಯ ಸರಕುಗಳ ಕಾಯ್ದೆ ತಿದ್ದುಪಡಿ ಮಸೂದೆಯು ರೈತ ವಿರೋಧಿಯಾಗಿದೆ ಎಂಬ ಬಿಜೆಪಿ ಮಿತ್ರಪಕ್ಷ ಶಿರೋಮಣಿ ಅಕಾಲಿ ದಳ ಸೇರಿದಂತೆ ವಿಪಕ್ಷಗಳ ಪ್ರತಿಭಟನೆಯ ನಡುವೆಯೇ ಲೋಕಸಭೆಯಲ್ಲಿ ಈ ಮಸೂದೆ ಅಂಗೀಕಾರವಾಗಿದೆ.
ಈ ಮಸೂದೆ ಕೃಷಿ ಕ್ಷೇತ್ರದ ಸುಧಾರಣೆಯಾಗಲಿದೆ. ಇದರಿಂದಾಗಿ ಕೃಷಿ ಕ್ಷೇತ್ರಕ್ಕೆ ಖಾಸಗಿ ಹೂಡಿಕೆ ಅಧಿಕವಾಗಿ ಇದರಿಂದಾಗಿ ರೈತರ ಆದಾಯ 2022 ರಲ್ಲಿ ದ್ವಿಗುಣವಾಗುತ್ತದೆ. ಇದು ಕೃಷಿ ಕ್ಷೇತ್ರದ ಮೂಲ ಸೌಕರ್ಯಗಳನ್ನು ಉತ್ತೇಜಿಸುತ್ತದೆ ಎಂದು ಸರ್ಕಾರ ಹೇಳಿದೆ.
ಈ ಮಸೂದೆಗಳನ್ನು ವಿರೋಧಿಸಿ ಪಂಜಾಬ್, ಹರಿಯಾಣ ಸೇರಿದಂತೆ ಹಲವು ರಾಜ್ಯಗಳ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರ ಈಗಾಗಲೇ ಸುಗ್ರೀವಾಜ್ಞೆಯನ್ನು ಮಾಡಿದೆ ಎಂದು ವರದಿ ತಿಳಿಸಿದೆ.
ಇನ್ನು ಈ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್ನ ಅಮರ್ ಸಿಂಗ್, ಈ ಮಸೂದೆಯನ್ನು ರೈತ ವಿರೋಧಿ ಮತ್ತು ಬಡ ಜನರ ವಿರೋಧಿ ಎಂದು ಕರೆದಿದ್ದಾರೆ. ಇನ್ನು ಈ ಮಸೂದೆಗೆ ಬಿಜೆಪಿಯ ಮಿತ್ರ ಪಕ್ಷ ಸೇರಿದಂತೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದು ಕೇಂದ್ರವು ರಾಜ್ಯಗಳ ಅಧಿಕಾರವನ್ನು ಕಿತ್ತುಕೊಂಡಿದೆ ಎಂದು ಆರೋಪಿಸಿದ್ದಾರೆ. ಹಾಗೆಯೇ ಈ ರೈತ ವಿರೋಧಿ, ಬಂಡವಾಳಶಾಹಿಗಳ ಪರವಾದ ಮಸೂದೆಗೆ ಸುಗ್ರೀವಾಜ್ಞೆಯನ್ನು ತರುವ ಆತುರ ಏನು ಎಂದು ನಮಗೆ ಅರ್ಥವಾಗುವುದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಮಿತ್ರ ಪಕ್ಷ ಶಿರೋಮಣಿ ಅಕಾಲಿ ದಳದ ನಾಯಕ ಸುಕ್ಬೀರ್ ಸಿಂಗ್ ಬಾದಲ್ ಮಾತನಾಡಿ, ನಾವು ಈ ರೈತ ವಿರೋಧಿ ಮಸೂದೆಯನ್ನು ವಿರೋಧಿಸುತ್ತೇವೆ. ಯಾವುದೇ ಕಾರಣಕ್ಕೂ ನಮ್ಮ ಪಕ್ಷದ ನಿಲುವನ್ನು ಸಡಿಲಿಸುವುದಿಲ್ಲ ಎಂದು ಲೋಕಸಭೆಯಲ್ಲಿ ಹೇಳಿದ್ದಾರೆ.