ಬೆಂಗಳೂರು, ಸೆ. 16 (DaijiworldNews/MB) : ಕಳೆದ ತಿಂಗಳು ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿಯಲ್ಲಿ ನಡೆದ ಹಿಂಸಾಚಾರದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು 12 ಕ್ಕೂ ಅಧಿಕ ಮುಸ್ಲಿಂ ಧರ್ಮಗುರುಗಳು ಮಂಗಳವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಒತ್ತಾಯಿಸಿದ್ದಾರೆ.
ಅಮೀರ್-ಇ-ಶರಿಯತ್, ಮೌಲಾನಾ ಸಾಗೀರ್ ಅಹ್ಮದ್ ನೇತೃತ್ವದ ಮೌಲ್ವಿಗಳು ಸಿಎಂಗೆ ಮನವಿ ಪತ್ರ ಸಲ್ಲಿಸಿದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಅಸಭ್ಯ ಸಂದೇಶಗಳನ್ನು ಪೋಸ್ಟ್ ಮಾಡಿ ಕೋಮು ದ್ವೇಷವನ್ನು ಹರಡಲು ಪ್ರಯತ್ನಿಸುವವರ ವಿರುದ್ದವೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದ ಮನವಿ ಮಾಡಿದ್ದಾರೆ.
ಈ ಬಗ್ಗೆ ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡಿರುವ ಮೌಲಾನಾ ಮಕ್ಸೂದ್ ಇಮ್ರಾನ್ ರಶಾದಿ ಅವರು, ಈ ಘಟನೆಗೆ ಸಂಬಂಧಿಸಿ ಕೆಲವು ಮುಗ್ಧ ಮುಸ್ಲಿಮರ ಮೇಲೆ ಪ್ರಕರಣ ದಾಖಲಾಗಿದ್ದು ಅವರನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಎಂದು ರಾಜ್ಯ ಸರ್ಕಾರವನ್ನು ನಾವು ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ.
ಈವರೆಗೆ ಪೊಲೀಸರು ಈ ಗಲಭೆಗೆ ಸಂಬಂಧಿಸಿ 300 ಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆದಿದ್ದಾರೆ. ಆದರೆ ವಾಸ್ತವವಾಗಿ ಈ ಪೈಕಿ ಅನೇಕ ಮಂದಿ ಅಮಾಯಕರು ಆಗಿದ್ದಾರೆ. ಕನಿಷ್ಠ ಪಕ್ಷ ಅವರನ್ನಾದರೂ ಬಿಡುಗಡೆ ಮಾಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ"ಎಂದು ಅವರು ವಿವರಿಸಿದರು.
ಕಾಂಗ್ರೆಸ್ ಶಾಸಕ ಶ್ರೀನಿವಾಸಮೂರ್ತಿಯವರ ಸೋದರಳಿಯ ಪಿ.ನವೀನ್ ಅವರು ಸಾಮಾಜಿಕ ಜಾಲತಾಣದಲ್ಲಿ ಇಂತಹ ಪೋಸ್ಟ್ಗಳನ್ನು ಮಾಡಲು ಯಾರು ಪ್ರೇರೇಪಿಸಿದವರು ಎಂಬ ಬಗ್ಗೆ ಸತ್ಯ ತಿಳಿದುಕೊಳ್ಳಬೇಕಾಗಿದ್ದು ಈ ಹಿನ್ನೆಲೆ ಈ ಪ್ರಕರಣದ ತನಿಖೆ ನಡೆಸಲು ಸ್ವತಂತ್ರ ನ್ಯಾಯಾಂಗ ಆಯೋಗ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ಹಾಗೆಯೇ ಕೋಮು ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡಲೆಂದೇ ಯಾರೋ ಒಬ್ಬರು ನವೀನ್ ಅವರಲ್ಲಿ ಈ ಪೋಸ್ಟ್ ಮಾಡಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದು ಸಾಮಾಜಿಕ ಮಾಧ್ಯಮದಲ್ಲಿ ಧಾರ್ಮಿಕ ದ್ವೇಷವನ್ನು ಹರಡುವ ಎಲ್ಲರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಇನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಗೆ (ಯುಎಪಿಎ)ಯ ಬಗ್ಗೆಯೂ ಈ ಮನವಿಯಲ್ಲಿ ಉಲ್ಲೇಖ ಮಾಡಲಾಗಿದ್ದು "ಇಂತಹ ಕಠಿಣ ಕಾನೂನು ಅಮಾಯಕರ ಸಂಪೂರ್ಣ ಜೀವನವನ್ನು ಹಾಳುಮಾಡುತ್ತದೆ. ಆದ್ದರಿಂದ ರಾಜ್ಯವು ಏಕಾಏಕಿಯಾಗಿ ಈ ಕಾನೂನನ್ನು ಬಳಸಬಾರದು ಎಂದು ಮನವಿಯ ಮೂಲಕ ಹೇಳಿದ್ದಾರೆ.
ಕಾಂಗ್ರೆಸ್ ಶಾಸಕ ಶ್ರೀನಿವಾಸಮೂರ್ತಿಯವರ ಸೋದರಳಿಯ ಪಿ.ನವೀನ್ ಅವರು ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಪೋಸ್ಟ್ ಮಾಡಿದ ಬಳಿಕ ಬೆಂಗಳೂರಿನಲ್ಲಿ ಈ ಹಿಂಸಾಚಾರ ನಡೆದಿದ್ದು ಗಲಭೆಕೋರರು ಶಾಸಕರ ಮನೆಯನ್ನು ಸುಟ್ಟು ಹಾಕಿದ್ದರು. ಈ ಸಂದರ್ಭ ನಡೆದ ಗೋಲಿಬಾರ್ನಿಂದಾಗಿ ಮೂವರು ಸಾವನ್ನಪ್ಪಿದ್ದು ನವೀನ್ ಸೇರಿದಂತೆ 300 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.