ನವದೆಹಲಿ, ಸೆ. 16 (DaijiworldNews/MB) : ಸುದರ್ಶನ್ ಟಿವಿಯ ವಿವಾದಾತ್ಮಕ ಕಾರ್ಯಕ್ರಮ ‘ಬಿಂದಾಸ್ ಬೋಲ್’ ನ ಪ್ರಸಾರವನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಡೆಹಿಡಿದಿದೆ. ಇದು 'ಮುಸ್ಲಿಂ ಸಮುದಾಯವನ್ನು ಕೆಣಕುತ್ತದೆ' ಎಂದು ಹೇಳಿದೆ. ಈ ಕಾರ್ಯಕ್ರಮ 'ಕ್ರೂರ ಕಾರ್ಯಕ್ರಮ' ಎಂದು ಕರೆದಿರುವ ಸುಪ್ರೀಂ ಸೆಪ್ಟೆಂಬರ್ 15 ಮತ್ತು 16 ರಂದು ಈ ಕಾರ್ಯಕ್ರಮವನ್ನು ಪ್ರಸಾರ ಮಾಡುವಂತಿಲ್ಲ ಎಂದು ಆದೇಶಿಸಿ ಈ ಪ್ರಕರಣದ ತನಿಖೆಯನ್ನು ಸೆಪ್ಟೆಂಬರ್ 17 ಕ್ಕೆ ಮುಂದೂಡಿದೆ.
ಸುದರ್ಶನ್ ನ್ಯೂಸ್ ತನ್ನ ಹೆಚ್ಚು ಪ್ರಚಾರ ಪಡೆದ 'ಯುಪಿಎಸ್ಸಿ ಜಿಹಾದ್' ಪ್ರೋಮೋಗಳಲ್ಲಿ ಸರ್ಕಾರಿ ಸೇವೆಯಲ್ಲಿ ಮುಸ್ಲಿಮರನ್ನು ಒಳನುಸುತ್ತಾರೆ ಎಂಬಂತೆ ಒಂದು ಸಮುದಾಯವನ್ನೇ ಗುರಿಯಾಗಿಸಿಕೊಂಡಿತ್ತು. ಈ ಕಾರ್ಯಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಕಾರ್ಯಕ್ರಮದ ವಿರುದ್ದ ನ್ಯಾಯವಾದಿ ಫಿಯೋಝ್ ಇಕ್ಬಾಲ್ ಖಾನ್ ಸುಪ್ರೀಂ ಮೆಟ್ಟಿಲೇರಿದ್ದರು. ಕಾರ್ಯಕ್ರಮದ ನಿರೂಪಕ, ಈ ವಾಹಿನಿಯ ಪ್ರಧಾನ ಸಂಪಾದಕ ಸುರೇಶ್ ಚಾವಂಕೆ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದರು.
ಮಂಗಳವಾರ ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಡಿವೈ ಚಂದ್ರಚೂಡ ನೇತೃತ್ವದ ನ್ಯಾಯಪೀಠ, ಈ ಕಾರ್ಯಕ್ರಮ ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು, ಆ ಸಮುದಾಯವನ್ನು ನಿಂದಿಸುತ್ತದೆ. ಒಂದು ಸಮುದಾಯವನ್ನು ನಿರ್ದಿಷ್ಟ ರೀತಿಯಲ್ಲಿ ಬ್ಯ್ರಾಂಡ್ ಮಾಡುವುದು ಸರಿಯಲ್ಲ. ಈ ಕಾರ್ಯಕ್ರಮವು ಕ್ರೂರವಾಗಿದೆ. ಯಾವುದೇ ಆರೋಪಗಳನ್ನು ವಾಸ್ತಾವಿಕ ಆಧಾರವಿಲ್ಲದೆ ಮಾಡುವುದು ಸರಿಯಲ್ಲ. ಇದನ್ನು ಹೇಗೆ ಅನುಮತಿ ನೀಡಲು ಸಾಧ್ಯ? ಸ್ವಾಸ್ಯ್ಥ ಸಮಾಜದಲ್ಲಿ ಇಂತಹ ಕಾರ್ಯಕ್ರಮಕ್ಕೆ ಅನುಮತಿ ನೀಡಲು ಸಾಧ್ಯವೇ? ಎಂದು ಹೇಳಿದ್ದಾರೆ.
ಏತನ್ಮಧ್ಯೆ, ಹಿರಿಯ ವಕೀಲ ಶ್ಯಾಮ್ ದಿವಾನ್ ಅವರು ಸುದರ್ಶನ್ ಟಿವಿಯ ಪರವಾಗಿ ವಾದಿಸಿದ್ದು, ಚಾನೆಲ್ ಇದನ್ನು ರಾಷ್ಟ್ರೀಯ ಭದ್ರತೆಯ ಕುರಿತ ತನಿಖಾ ವರದಿ ಎಂದು ಪರಿಗಣಿಸಿದೆ ಎಂದು ಹೇಳಿದರು.
ದಿವಾನ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನಿಮ್ಮ ಕಕ್ಷಿದಾರ ರಾಷ್ಟ್ರಕ್ಕೆ ಅಪಚಾರ ಮಾಡುತ್ತಿದ್ದಾರೆ. ಭಾರತವು ತಮ್ಮ ವೈವಿಧ್ಯಮಯ ಸಂಸ್ಕೃತಿಗೆ ಧಕ್ಕೆ ಉಂಟಾಗುವ ಈ ಕಾರ್ಯಕ್ರಮವನ್ನು ಒಪ್ಪಲು ಸಾಧ್ಯವಿಲ್ಲ. ನಿಮ್ಮ ಕಕ್ಷಿದಾರರು ತಮ್ಮ ಸ್ವಾತಂತ್ರ್ಯವನ್ನು ಎಚ್ಚರಿಕೆಯಿಂದ ಬಳಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಮಾಧ್ಯಮಗಳ ಹಕ್ಕು ನಾಗರಿಕರ ಪರವಾಗಿದೆ ಮತ್ತು ಅದು ಮಾಧ್ಯಮಗಳ ಪ್ರತ್ಯೇಕ ಹಕ್ಕಲ್ಲ ಎಂದು ಕೂಡಾ ತಿಳಿಸಿದೆ.