ನವದೆಹಲಿ, ಸೆ 16 (DaijiworldNews/PY): ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)ಯು, ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾಗೆ ಆಕ್ಸ್ಫರ್ಡ್ ಕೊರೊನಾ ಲಸಿಕೆಯ ಕ್ಲಿನಿಕಲ್ ಪ್ರಯೋಗ ಮುಂದುವರೆಸಲು ಅನುಮತಿ ನೀಡಿದೆ.
ಅಲ್ಲದೇ, ಸ್ಕ್ರೀನಿಂಗ್ ಸಮಯದಲ್ಲಿ ಹೆಚ್ಚಿನ ಕಾಳಜಿ ವಹಿಸುವುದು, ಒಪ್ಪಿಗೆ ಪ್ರಮಾಣ ಪತ್ರದಲ್ಲಿ ಹೆಚ್ಚಿನ ಪ್ರಯೋಗದ ಕುರಿತು ಹೆಚ್ಚಿನ ಮಾಹಿತಿ ನೀಡುವುದು ಮುಂತಾದ ನಿಯಮಗಳನ್ನು ಸೂಕ್ಮ್ಷವಾಗಿ ಅನುಸರಿಸಬೇಕು ಎಂದು ಡಿಸಿಜಿಐ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ)ಗೆ ತಿಳಿಸಿದೆ.
ಈ ಪ್ರಯೋಗದ ನಿರ್ವಹಣೆಗೆ ಮಾರ್ಗಸೂಚಿಗಳ ಅನುಗುಣವಾಗಿ ಬಳಸುವ ಔಷಧಿಗಳ ವಿವರಗಳನ್ನು ಡಿಸಿಜಿಐ ಕಚೇರಿಗೆ ಸಲ್ಲಿಸಲು ಎಸ್ಐಐಗೆ ಸೂಚಿಸಲಾಗಿದೆ.
ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಆಕ್ಸ್ಫರ್ಡ್ ಕೊರೊನಾ ಲಸಿಕೆಯ ಎರಡನೇ ಮತ್ತು ಮೂರನೆ ಕ್ಲಿನಿಕಲ್ ಪ್ರಯೋಗಕ್ಕೆ ಸ್ವಯಂ ಸೇವಕ ನೇಮಕಾತಿಗೆ ತಯಾರಾಗಿತ್ತು. ಆದರೆ, ಆಸ್ಟ್ರಾ ಜೆನಿಕದ ಘಟನೆಯ ನಂತರ ಪ್ರಯೋಗಕ್ಕೆ ಸಂಬಂಧಪಟ್ಟಂತೆ ಹೊಸ ನೇಮಕಾತಿ ಮಾಡದಂತೆ ಸೆ.11ರಂದು ಡಿಸಿಜಿಐ ನಿರ್ದೇಶಿಸಿತ್ತು.
ಬ್ರಿಟಿಷ್-ಸ್ವೀಡಿಷ್ ಜೈವಿಕ ಔಷಧೀಯ ಅಸ್ಟ್ರಾಜೆನೆಕಾ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾಲಯವು ಕೊರೊನಾ ಲಸಿಕೆ ಪ್ರಯೋಗ ಸುರಕ್ಷಿತವಾಗಿದೆ ಎಂದು ದೃಢಪಡಿಸಿದ ಬಳಿಕ ಕ್ಲಿನಿಕಲ್ ಪ್ರಯೋಗಕ್ಕೆ ಬ್ರಿಟನ್ ಸರ್ಕಾರ ಅನುಮತಿ ನೀಡಿದೆ.