ಬೆಂಗಳೂರು, ಸೆ 16 (DaijiworldNews/PY): ಬೆನ್ನು ಮೂಳೆಯಿಲ್ಲದ ಸರ್ಕಾರ ಎಂದು ಮುಖ್ಯಮಂತ್ರಿಗಳು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಕೇಂದ್ರದಿಂದ ನಮಗೆ ಬರಬೇಕಾದ ತೆರಿಗೆ ಪಾಲನ್ನು ಧೈರ್ಯವಾಗಿ ಕೇಳಲು ನಿಮ್ಮ ಸರ್ಕಾರಕ್ಕೆ ತಾಕತ್ತಿಲ್ಲವೆ? ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಮಾನ್ಯ ಮುಖ್ಯಮಂತ್ರಿಗಳೇ, ನಿಮ್ಮದು ಬೆನ್ನು ಮೂಳೆಯಿಲ್ಲದ ಸರ್ಕಾರ ಎಂದು ಮತ್ತೊಮ್ಮೆ ಸಾಬೀತು ಮಾಡಿಬಿಟ್ರಿ! ಅಲ್ಲಾ ಸ್ವಾಮಿ,ಕೇಂದ್ರದಿಂದ ನಮಗೆ ಬರಬೇಕಾದ ತೆರಿಗೆ ಪಾಲನ್ನು ಧೈರ್ಯವಾಗಿ ಕೇಳಲು ನಿಮ್ಮ ಸರ್ಕಾರಕ್ಕೆ ತಾಕತ್ತಿಲ್ಲವೆ?ನಿಮ್ಮ ಪುಕ್ಕಲುತನದಿಂದ ಮಾಡುವ ಸಾಲಕ್ಕೆ ರಾಜ್ಯದ ಜನರು ಹೊನ್ನಶೂಲಕ್ಕೇರಬೇಕೆ? ಎಂದು ಪ್ರಶ್ನಿಸಿದ್ದಾರೆ.
ಕೋವಿಡ್ ಪ್ರಾರಂಭವಾದ ದಿನದಿಂದಲೂ ಸರ್ಕಾರದ ಒಂದಲ್ಲ ಒಂದು ಹಗರಣ ಬಯಲಾಗುತ್ತಲೇ ಇದೆ. ಬಿಐಇಸಿ ಆವರಣದಲ್ಲಿ ತೆರೆದಿದ್ದ ದೇಶದ ದೊಡ್ಡ ಕೋ ವಿಡ್ ಆರೈಕೆ ಕೇಂದ್ರಕ್ಕೆ ಬೀಗ ಬಿದ್ದಿದೆ. ಹಾಗಾದರೆ ಆರೈಕೆ ಕೇಂದ್ರ ತೆರೆದಿದ್ಯಾಕೆ? ಕೊಟ್ಯಂತರ ತೆರಿಗೆ ಹಣ ಖರ್ಚು ಮಾಡಿದ್ಯಾಕೆ? 'ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ' ಎಂದಿದ್ದಾರೆ.