ಲಖನೌ, ಸೆ. 16 (DaijiworldNews/MB) : ಸಿಬಿಐ ವಿಶೇಷ ನ್ಯಾಯಾಲಯವು 28 ವರ್ಷಗಳ ಹಳೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪನ್ನು ಸೆ. 30 ರಂದು ಪ್ರಕಟಿಸಲಿದ್ದು ಈ ವಿಚಾರಣೆ ಸಂದರ್ಭ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಸೇರಿದಂತೆ ಎಲ್ಲಾ 32 ಆರೋಪಿಗಳು ಕೋರ್ಟ್ನಲ್ಲಿ ಹಾಜರಿರತಕ್ಕದ್ದು ಎಂದು ಕೋರ್ಟ್ ಸೂಚಿಸಿದೆ.
ಬುಧವಾರ ಈ ಬಗ್ಗೆ ನ್ಯಾಯಾಧೀಶ ಎಸ್.ಕೆ. ಯಾದವ್ ಅವರು ನಿರ್ದೇಶನ ನೀಡಿದ್ದಾರೆ.
1992 ರ ಡಿಸೆಂಬರ್ 6 ರಂದು ಕರಸೇವಕರು ಬಾಬ್ರಿ ಮಸೀದಿ ಧ್ವಂಸ ನಡೆಸಿದ ಪ್ರಕರಣದಲ್ಲಿ ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ ಮತ್ತು ಬಿಜೆಪಿ ನಾಯಕರಾದ ಎಂ ಎಂ ಜೋಶಿ, ಕಲ್ಯಾಣ್ ಸಿಂಗ್, ಉಮಾ ಭಾರತಿ ಹಾಗೂ ವಿನಯ್ ಕಟಿಯಾರ್ ಸೇರಿದಂತೆ 32 ಆರೋಪಿಗಳು ಭಾಗಿಯಾಗಿರುವ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.
ಈ ಪ್ರಕರಣದ ವಾದ-ಪ್ರತಿವಾದವು ಸೆಪ್ಟೆಂಬರ್ 1 ರಂದು ಅಂತ್ಯವಾಗಿದ್ದು ಇದೀಗ ಇದರ ತೀರ್ಪು ಸೆ.30ರಂದು ಪ್ರಕಟವಾಗಲಿದೆ. ಒಟ್ಟು 351 ಸಾಕ್ಷಿಗಳು ಮತ್ತು ಸುಮಾರು 600 ಸಾಕ್ಷ್ಯಚಿತ್ರಗಳ ಸಾಕ್ಷ್ಯಗಳನ್ನು ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.