ನವದೆಹಲಿ, ಸೆ 16 (DaijiworldNews/PY): ದೇಶದಲ್ಲಿ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಆರ್ಬಿಐ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಬುಧವಾರ ತಿಳಿಸಿದ್ದಾರೆ.
ಕೈಗಾರಿಕಾ ಸಂಸ್ಥೆ ಎಫ್ಐಸಿಸಿಐ ಆಯೋಜಿಸಿದ್ದ ವರ್ಚುವಲ್ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಭಾರತೀಯ ಆರ್ಥಿಕತೆಯು ಶೇ.23.9ರಷ್ಟು ಇಳಿಕೆಯಾಗಿದೆ. ಸರ್ಕಾರ ಬಿಡುಗಡೆಗೊಳಿಸಿದ ಒಟ್ಟು ಜಿಡಿಪಿ ದರವು ಕೊರೊನಾ ವಿನಾಶದ ಪ್ರತಿಬಿಂಬವಾಗಿದೆ ಎಂದರು.
ಅಲ್ಲದೇ, ಆರ್ಥಿಕ ಚೇತರಿಕೆ ಇನ್ನೂ ಸಂಪೂರ್ಣವಾಗಿ ಭದ್ರವಾಗಿಲ್ಲ. ಆದರೆ, ಕ್ರಮೇಣ ಚೇತರಿಕೆ ಸಾಧ್ಯತೆ ಇದೆ ಎಂದು ಹೇಳಿದರು.
ಕೆಲವು ಕ್ಷೇತ್ರಗಳಲ್ಲಿ ಜೂನ್ ಹಾಗೂ ಜುಲೈನಲ್ಲಿ ಬೆಳವಣಿಗೆ ಚೇತರಿಕೆಯಾಗಿದೆ. ಈ ನಡುವೆ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದರು, ಆರ್ಥಿಕತೆ ಕ್ರಮೇಣವಾಗಿ ಚೇತರಿಕೆ ಹೊಂದುವ ಸಾಧ್ಯತೆ ಇದೆ ಎಂದು ಹೇಳಿದರು.
ಕೊರೊನಾ ಪ್ರೇರಿತ ಬಿಕ್ಕಟ್ಟಿನಿಂದ ಹೊರಬರಲು ಉದ್ಯಮ ಮತ್ತು ವ್ಯವಹಾರಗಳಿಗೆ ಸಹಾಯ ಮಾಡಲು ಆರ್ಬಿಐ ಸನ್ನದ್ದವಾಗಿದೆ. ಅಲ್ಲದೇ, ಅಗತ್ಯವಿರುವ ಯಾವುದೇ ಕ್ರಮಗಳನ್ನು ಆರ್ಬಿಐ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.