ಶ್ರೀನಗರ, ಸೆ. 17 (DaijiworldNews/MB) : ಹಲವು ತಿಂಗಳುಗಳಿಂದ ಉಗ್ರರನ್ನು ಸದೆಬಡಿಯುತ್ತಿರುವ ಭಾರತೀಯ ಸೇನಾಪಡೆಯು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಬಟಾಮಲೂ ಎಂಬ ಪ್ರದೇಶದಲ್ಲಿ ಮೂವರು ಉಗ್ರರನ್ನು ಗುರುವಾರ ಹೊಡೆದುರುಳಿಸಿದೆ.
ಈ ಪ್ರದೇಶದಲ್ಲಿ ಉಗ್ರರು ಅಡಗಿ ಕೂತಿರುವ ಹಾಗೂ ಉಗ್ರರ ಅನುಮಾನಾಸ್ಪದ ಓಡಾಟಗಳ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯನ್ನು ಗುರುವಾರ ಮುಂಜಾನೆಯೇ ಕಾರ್ಯಚರಣೆ ಆರಂಭ ಮಾಡಿದ್ದ ಭದ್ರತಾಪಡೆಗಳು ಮೂವರು ಉಗ್ರರನ್ನು ಹತ್ಯೆಗೈದಿದೆ.
ಕಾರ್ಯಚರಣೆ ಆರಂಭವಾಗುತ್ತಿದ್ದಂತೆ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದು ಕೂಡಲೇ ಕಾರ್ಯಾಚರಣೆಯನ್ನು ಎನ್ಕೌಂಟರ್ ಆಗಿ ಪರಿವರ್ತಿಸಿದ ಸೇನಾಪಡೆಗಳು ಮೂವರನ್ನು ಸದೆಬಡಿದಿದ್ದು ಈ ಪ್ರದೇಶದಲ್ಲಿ ಕಾರ್ಯಚರಣೆ ಮುಂದುವರೆದಿದೆ ಎಂದು ತಿಳಿದು ಬಂದಿದೆ.
ಇನ್ನು ಕೇಂದ್ರ ಗೃಹ ಸಚಿವಾಲಯವು ಬುಧವಾರ ರಾಜ್ಯಸಭೆಗೆ ಲಿಖಿತ ಹೇಳಿಕೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಉಗ್ರರ ಒಳನುಸುಳುವಿಕೆಯ ಬಗ್ಗೆ ಮಾಹಿತಿ ನೀಡಿದ್ದು ಪಾಕ್ ಉಗ್ರರು ಜಮ್ಮು ಮತ್ತು ಕಾಶ್ಮೀರದೊಳಗೆ 594 ಬಾರಿ ನುಸುಳಲು ಯತ್ನಿಸಿದ್ದು ಈ ಪೈಕಿ 312 ಬಾರಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದೆ. ಭದ್ರತಾ ಪಡೆಯು ಕಳೆದ ಮೂರು ತಿಂಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 562 ಉಗ್ರರನ್ನು ಹತ್ಯೆ ಮಾಡಿದ್ದು ಒಟ್ಟು 46 ಉಗ್ರರನ್ನು ಬಂಧಿಸಿದ್ದಾರೆ. 2018ರಿಂದ ಸೆಪ್ಟೆಂಬರ್ 8, 2020ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 76 ಸೇನಾ ಯೋಧರು ಹತ್ಯೆಯಾಗಿದ್ದಾರೆ ಎಂದು ಗೃಹ ಖಾತೆಯ ರಾಜ್ಯ ಸಚಿವ ಜಿ. ಕೃಷ್ಣಾರೆಡ್ಡಿ ರಾಜ್ಯಸಭೆಗೆ ತಿಳಿಸಿದ್ದಾರೆ.