ನವದೆಹಲಿ, ಸೆ. 17 (DaijiworldNews/MB) : ಕೇಂದ್ರ ಬಿಜೆಪಿ ಸರ್ಕಾರದ ಮಿತ್ರಪಕ್ಷವಾದ ಶಿರೋಮಣಿ ಅಕಾಲಿದಳ ಕೃಷಿ ಸಂಬಂಧಿ ವಿಧೇಯಕಗಳಿಗೆ ವಿರೋಧ ವ್ಯಕ್ತಪಡಿಸಿದ್ದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಕೃಷಿ ಸಂಬಂಧಿ ವಿಧೇಯಕಗಳನ್ನು ಮಂಡಿಸುವ ಸಂದರ್ಭದಲ್ಲಿ ವಿರೋಧ ವ್ಯಕ್ತಪಡಿಸುವಂತೆ ವಿಪ್ ಜಾರಿಗೊಳಿಸಿದೆ.
ಅಗತ್ಯ ವಸ್ತುಗಳ (ತಿದ್ದುಪಡಿ) ಮಸೂದೆ-2020, ಕೃಷಿ ಉತ್ಪನ್ನ, ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ-2020 ಮತ್ತು ಬೆಲೆ ಖಾತರಿ ಮತ್ತು ಕೃಷಿ ಸೇವೆಗೆ ಸಂಬಂಧಿಸಿದ ರೈತರ (ಸಬಲೀಕರಣ ಮತ್ತು ರಕ್ಷಣೆ) ಮಸೂದೆ-2020ನ್ನು ವಿರೋಧಿಸುವಂತೆ ಪಕ್ಷದ ಮುಖ್ಯ ಸಚೇತಕ ನರೇಶ್ ಗುಜ್ರಾಲ್ ತಮ್ಮ ಪಕ್ಷದ ಸದಸ್ಯರಿಗೆ ವಿಪ್ನಲ್ಲಿ ತಿಳಿಸಿದ್ದಾರೆ.
ಪಕ್ಷದ ಮುಖಂಡ ಹಾಗೂ ಫತೇಪುರ ಸಂಸದ ಸುಖ್ಬೀರ್ ಬಾದರ್ ಕೂಡಾ ಮಂಗಳವಾರ ಲೋಕಸಭೆಯಲ್ಲಿ ಅಗತ್ಯ ವಸ್ತುಗಳ ತಿದ್ದುಪಡಿ ಮಸೂದೆಯ ವಿರುದ್ದ ಮತ ಚಲಾಯಿಸಿದ್ದರು.