ನವದೆಹಲಿ, ಸೆ. 17 (DaijiworldNews/MB) : ಕೊರೊನಾ ನಿಯಂತ್ರಣದ ವಿಚಾರದಲ್ಲಿ ರಾಜ್ಯ ಸಭೆಯಲ್ಲಿ ಬಿಜೆಪಿ ಸದ್ಯಸರು ಹಾಗೂ ಆಮ್ ಆದ್ಮಿ ಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆದಿದ್ದು ಸರ್ಕಾರ ಚಪ್ಪಾಳೆ ತಟ್ಟಿ, ಗಂಟೆ ಬಾರಿಸಲು ಹೇಳಿರುವುದು ಮೂರ್ಖತನ ಎಂದು ಆಪ್ ಸದಸ್ಯರು ಕಿಡಿಕಾರಿದ್ದಾರೆ.
ಜಗತ್ತಿನಲ್ಲಿ ಎಲ್ಲಿಯೂ ಕೂಡಾ ಕೊರೊನಾ ವೈರಸ್ ತಡೆಗಟ್ಟಲು ಚಪ್ಪಾಳೆ ತಟ್ಟಿ, ಗಂಟೆ ಬಾರಿಸಿ ಎಂದು ಹೇಳಿಲ್ಲ. ಆ ರೀತಿಯ ಯಾವುದೇ ಉದಾಹರಣೆ ಇದ್ದರೆ ನೀಡಿ ಎಂದು ಸರ್ಕಾರಕ್ಕೆ ಸವಾಲೆಸೆದಿರುವ ಆಮ್ ಸದಸ್ಯರು, ಇಂತಹ ಯಾವುದೇ ಉದಾಹರಣೆ ನೀವು ನೀಡಿದರೆ ಎಲ್ಲಾ ವಿರೋಧ ಪಕ್ಷದವರು ಪ್ರಧಾನಿ ಜೊತೆ ಚಪ್ಪಾಳೆ ತಟ್ಟಿ, ಸಂಸತ್ ಆವರಣದಲ್ಲಿ ದೀಪ ಬೆಳಗಿಸುತ್ತೇವೆ ಎಂದು ಹೇಳಿದ್ದಾರೆ.
ಸರ್ಕಾರದ ವಿರುದ್ದ ಕೊರೊನಾ ಸಂದರ್ಭದಲ್ಲಿ ಕೆಲವು ಉಪಕರಣಗಳ ಖರೀದಿಯಲ್ಲಿ ಭ್ರಷ್ಟಚಾರ ಮಾಡಿರುವ ಆರೋಪವಿದ್ದು ಈ ಸರ್ಕಾರವು ಈ ಸಂಕಷ್ಟದ ಸಂದರ್ಭವನ್ನು ಕೂಡಾ ಲಾಭ ಮಾಡುವ ಅವಕಾಶವಾಗಿ ಬಳಸಿಕೊಂಡಿದೆ ಎಂದು ಆರೋಪ ಮಾಡಿರುವ ಆಪ್ ಸದಸ್ಯರಿಗೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಸದಸ್ಯ ಸುಧಾನ್ಶು ತ್ರಿವೇದಿ, ಅದು ಸಾಂಕೇತಿಕವಾಗಿ ನೀಡಿದ ಕರೆ. ಕೊರೊನಾ ನಿಯಂತ್ರಿಸಲು ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ, ಜನರನ್ನು ಒಗ್ಗೂಡಿಸಲು ಈ ಪ್ರಯತ್ನ ಮಾಡಲಾಗಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಅವರು ಚರಕ ಚಿಹ್ನೆಯನ್ನು ಬಳಸಿ ಒಗ್ಗೂಡಿಸುವ ಕಾರ್ಯ ಕೈಗೊಂಡಿದ್ದರು. ಅದೇ ಮಾದರಿಯನ್ನು ಪ್ರಧಾನಿ ಅವರು ಅನುಸರಿಸಿದ್ದಾರೆ ಎಂದು ಸಮರ್ಥಿಸಿಕೊಂಡರು.