ನವದೆಹಲಿ, ಸೆ. 17 (DaijiworldNews/MB) : ಸುದರ್ಶನ್ ಟಿವಿಯ 'ಬಿಂದಾಸ್ ಬೋಲ್' ಕಾರ್ಯಕ್ರಮದ ಬಗ್ಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ವೇಳೆ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದು ಸುಪ್ರೀಂ ಕೋರ್ಟ್ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರುವಂತಹ ನಿರ್ಧಾರ ಕೈಗೊಳ್ಳುವುದಾದರೆ ಮೊದಲು ಡಿಜಿಟಲ್ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಬೇಕು ಎಂದು ಹೇಳಿದೆ.
ಸುದರ್ಶನ್ ನ್ಯೂಸ್ ತನ್ನ ಹೆಚ್ಚು ಪ್ರಚಾರ ಪಡೆದ 'ಯುಪಿಎಸ್ಸಿ ಜಿಹಾದ್' ಪ್ರೋಮೋಗಳಲ್ಲಿ ಸರ್ಕಾರಿ ಸೇವೆಯಲ್ಲಿ ಮುಸ್ಲಿಮರನ್ನು ಒಳನುಸುತ್ತಾರೆ ಎಂಬಂತೆ ಒಂದು ಸಮುದಾಯವನ್ನೇ ಗುರಿಯಾಗಿಸಿಕೊಂಡಿತ್ತು. ಈ ಕಾರ್ಯಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಕಾರ್ಯಕ್ರಮದ ವಿರುದ್ದ ನ್ಯಾಯವಾದಿ ಫಿಯೋಝ್ ಇಕ್ಬಾಲ್ ಖಾನ್ ಸುಪ್ರೀಂ ಮೆಟ್ಟಿಲೇರಿದ್ದರು. ಸುದರ್ಶನ್ ಟಿವಿಯ ವಿವಾದಾತ್ಮಕ ಕಾರ್ಯಕ್ರಮ ‘ಬಿಂದಾಸ್ ಬೋಲ್’ ನ ಪ್ರಸಾರವನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಡೆಹಿಡಿದಿದೆ.
ಇದೀಗ ಈ ಅರ್ಜಿಯ ವಿಚಾರಣೆ ವೇಳೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಈಗಾಗಲೇ ಸಾಕಷ್ಟು ನೀತಿ ನಿಯಮಗಳ ಚೌಕಟ್ಟುಗಳಿವೆ. ಸುಪ್ರೀಂ ಕೋರ್ಟ್ ಮಾಧ್ಯಮಗಳ ಮೇಲೆ ನಿಯಂತ್ರಣ ಹೇರುವಂತಹ ನಿರ್ಧರಿಸುವುದಾದರೆ, ತ್ವರಿತಿಗತಿಯಲ್ಲಿ ಮಾಹಿತಿ ಹಂಚುವ ಡಿಜಿಟಲ್ ಮಾಧ್ಯಮಗಳಿಗೆ ಮೊದಲು ನಿರ್ಬಂಧ ವಿಧಿಸಬೇಕಿದೆ. ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಒಂದು ಬಾರಿ ಮಾತ್ರ ಸುದ್ದಿಗಳು ಪ್ರಸಾರವಾಗುತ್ತದೆ. ಆದರೆ ಡಿಜಿಟಲ್ ಮಾಧ್ಯಮದಲ್ಲಿ ವಾಟ್ಸ್ಆ್ಯಪ್, ಫೇಸ್ಬುಕ್, ಟ್ವಿಟರ್ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಬಹುದೊಡ್ಡ ವೀಕ್ಷಕ/ ಓದುಗ ವರ್ಗವನ್ನು ತಲುಪತ್ತದೆ ಎಂದು ಹೇಳಿದೆ.