ನವದೆಹಲಿ, ಸೆ. 17 (DaijiworldNews/MB) : ಕೊರೊನಾ ವಿರುದ್ದ ಹೋರಾಡಲು ಭಾಭೀ ಜೀ ಕೆ ಪಾಪಡ್ ಉತ್ತಮ ಎಂದು ಹೇಳಿದ್ದ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರೊಂದಿಗೆ ರಾಜ್ಯಸಭೆಯಲ್ಲಿ ವಾಗ್ವಾದಕ್ಕೆ ಇಳಿದ ಶಿವಸೇನೆ ಸಂಸದ ಸಂಜಯ್ ರಾವತ್ ಅವರು, ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಮಹಾರಾಷ್ಟ್ರ ಉತ್ತಮ ಸಾಧನೆ ಮಾಡಿದೆ ಮತ್ತು ಭಾಭೀ ಜೀ ಕೆ ಪಾಪಡ್ ತಿಂದು ಯಾರೂ ಕೂಡಾ ಕೊರೊನಾದಿಂದ ಗುಣಮುಖರಾಗಿಲ್ಲ ಎಂದು ಟಾಂಗ್ ನೀಡಿದ್ದಾರೆ.
ಜುಲೈನಲ್ಲಿ ‘ಆತ್ಮ ನಿರ್ಭರ ಭಾರತ ಅಭಿಯಾನದಡಿ ಬಾಬ್ಜಿ ಪಾಪಡ್ ತಯಾರಿಸಲಾಗ್ತಿದೆ. ಇದು ಕೊರೊನಾ ವಿರುದ್ಧ ಹೋರಾಡುತ್ತದೆ. ನೀವು ಇದನ್ನು ಸೇವಿಸಿದರೆ ಕೊರೊನಾದಿಂದ ದೂರ ಇರಬಹುದು ಎಂದು ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಹೇಳಿದ್ದರು.
ಗುರುವಾರ ರಾಜ್ಯಸಭೆಯಲ್ಲಿ ಮೇಘವಾಲ್ ವಿರುದ್ದ ವಾಗ್ದಾಳಿ ನಡೆಸಿದ ರಾವತ್ ಅವರು, "ಮಹಾರಾಷ್ಟ್ರವು ಕೊರೊನಾ ಹರಡುವಿಕೆಯನ್ನು ನಿಯಂತ್ರಿಸಿದ್ದು ಅದಕ್ಕೆ ಅತ್ಯುತ್ತಮ ಉದಾಹರಣೆ ದೇಶದ ಅತಿದೊಡ್ಡ ಕೊಳೆಗೇರಿ ಧಾರವಿ. ಅನೇಕ ಮಂತ್ರಿಗಳು ಸೋಂಕಿಗೆ ಒಳಗಾಗಿದ್ದಾರೆ, ಮಾಜಿ ಕ್ರಿಕೆಟಿಗ-ಸಚಿವ ಚೇತನ್ ಚೌಹಾನ್ ನಿಧನರಾಗಿದ್ದಾರೆ. ನನ್ನ ಅಮ್ಮ ಮತ್ತು ಸಹೋದರನಿಗೆ ಕೊರೊನಾ ಸೋಂಕು ತಗುಲಿದೆ. ಹಾಗೆಯೇ ಅನೇಕ ಮಂದಿ ಗುಣಮುಖರಾಗುತ್ತಿದ್ದಾರೆ. ಕೆಲವು ಮಂದಿ ಮಹಾರಾಷ್ಟ್ರವನ್ನು ಟೀಕಿಸುತ್ತಾರೆ. ಆದರೆ ಇಷ್ಟೊಂದು ಮಂದಿ ಗುಣಮುಖರಾಗಿರುವುದು ಭಾಭೀ ಜೀ ಕೆ ಪಾಪಡ್ ತಿಂದೇ? ಎಂದು ಪ್ರಶ್ನಿಸಿರುವ ಅವರು, ರಾಜಕೀಯ ಹೋರಾಟ ಅಲ್ಲ, ಜನರನ್ನು ಬದುಕಿಸಲು ಇರುವ ಹೋರಾಟ ಎಂದು ಹೇಳಿದ್ದಾರೆ.