ನವದೆಹಲಿ, ಸೆ 17 (DaijiworldNews/PY): ಚೀನಾ ದ್ವಿಪಕ್ಷೀಯ ಒಪ್ಪಂದಗಳನ್ನು ಗೌರವಿಸುವುದರಲ್ಲಿ ವಿಫಲವಾಗುತ್ತಿದೆ. ಬೀಜಿಂಗ್ ಹೇಳುವುದಕ್ಕೂ ಹಾಗೂ ಚೀನಾ ಮಾಡುವುದಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಗುರುವಾರ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ಎಲ್ಎಸಿಯ ಪಶ್ಚಿಮ ವಲಯದ ಹಲವಾರು ಭಾಗಗಳಲ್ಲಿ ಚೀನಾ ಸೇನೆ ಒಳಕ್ಕೆ ನುಸುಳಲು ಪ್ರಯತ್ನಿಸಿದೆ. ಆದರೆ, ಇದಕ್ಕೆ ಸರಿಯಾದ ಸಮಯದಲ್ಲಿ ನಮ್ಮ ಸೇನಾಪಡೆ ಪ್ರತಿಕ್ರಿಯೆ ನೀಡಿ ಅವರ ಪ್ರಯತ್ನಗಳನ್ನು ವಿಫಲಗೊಳಿಸಿದೆ ಎಂದು ತಿಳಿಸಿದ್ದಾರೆ.
ಚೀನಾ ಸೈನ್ಯ ಕಳೆದ ಹಲವು ದಶಕಗಳಿಂದ ಗಡಿ ಪ್ರದೇಶಗಳಲ್ಲಿ ತನ್ನ ಸೈನ್ಯದ ನಿಯೋಜನಾ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ಮೂಲ ಸೌಕರ್ಯದ ನಿರ್ಮಾಣಗಳನ್ನು ಮಾಡುತ್ತಾ ಬಂದಿದೆ. ಗಡಿ ಭಾಗದ ಮೂಲಸೌಕರ್ಯ ಅಭಿವೃದ್ದಿಗೆ ಕಳೆದ ಬಾರಿಗಿಂತ ಹೆಚ್ಚು ಬಜೆಟ್ ಅನ್ನು ನಮ್ಮ ಸರ್ಕಾರ ವಿನಿಯೋಗ ಮಾಡಿದೆ ಎಂದಿದ್ದಾರೆ.
ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಶಾಂತಿಯುತವಾದ ಪರಿಹಾರ ಕಂಡುಕೊಳ್ಳಲು ಇಚ್ಛಿಸುತ್ತದೆ. ಅಲ್ಲದೇ, ದೇಶದ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳಲು ಅವಶ್ಯಕವಾದ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದ್ದಾರೆ.