ಲಖನೌ, ಸೆ 17 (DaijiworldNews/PY): ಇನ್ನೂ ಕೂಡಾ ಸರ್ಕಾರ ಕಣ್ಣು ಮುಚ್ಚಿ ಕುಳಿತಿದ್ದಲ್ಲಿ, ಸರ್ಕಾರವನ್ನು ಯುವಕರು ಬದಲಾಯಿಸುತ್ತಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬಿಜೆಪಿ ಸರ್ಕಾರದ ವಿರುದ್ದ ಹರಿಹಾಯ್ದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ 70ನೇ ಜನ್ಮದಿನವನ್ನು ನಿರುದ್ಯೋಗ ದಿನ ಎಂದು ಟೀಕೆ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಮಯೋಚಿತವಾದ ಪರೀಕ್ಷೆಗಳು, ಸಮಯಕ್ಕೆ ಸರಿಯಾದ ಫಲಿತಾಂಶಗಳು, ಉದ್ಯೋಗಗಳ ಹೆಚ್ಚಳ ಹಾಗೂ ಗುತ್ತಿಗೆಯ ಕಾನೂನನ್ನು ಪುನಃ ತೆಗದುಕೊಳ್ಳುವುದು ಇದೆಲ್ಲಾ ಯುವ ಜನತೆಯ ಬೇಡಿಕೆಯಾಗಿದೆ ಎಂದಿದ್ದಾರೆ.
ತಮ್ಮ ಬೇಡಿಕೆಯ ಈಡೇರಿಕೆಗಾಗಿ ಯುವ ಜನರು ಧ್ವನಿ ಎತ್ತಿದ್ದಾರೆ. ಈಗಲೂ ಕೂಡಾ ಸರ್ಕಾರ ಕುರುಡಾಗಿ ಕುಳಿತಿದ್ದರೆ, ಅಲ್ಲದೇ ಯುವಕರ ನಿಲುವನ್ನು ಬದಲಾಯಿಸದೇ ಇದ್ದರೆ, ಯುವಕರು ಸರ್ಕಾರವನ್ನೇ ಬದಲಾಯಿಸುತ್ತಾರೆ. ನಿರುದ್ಯೋಗ ಸಮಸ್ಯೆ ರಾಜಕೀಯವಲ್ಲ, ಬದಲಾಗಿ ಅದು ಮಾನವೀಯತೆ ಎಂದು ಹೇಳಿದ್ದಾರೆ.