ನವದೆಹಲಿ, ಸೆ.18 (DaijiworldNews/HR): ಅಮೇರಿಕಾದ ಹ್ಯೂಸ್ಟನ್ನಲ್ಲಿ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ನಡೆದ 'ಹೌಡಿ ಮೋದಿ' ಕಾರ್ಯಕ್ರಮದ ಯಾವುದೇ ವೆಚ್ಚವನ್ನು ಸರ್ಕಾರ ಪಾವತಿಸಿಲ್ಲ. ಅದನ್ನು ಟೆಕ್ಸಾಸ್ ಇಂಡಿಯಾ ಫೊರಂ ಸಂಸ್ಥೆ ಆಯೋಜಿಸಿತ್ತು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಡೊನಾಲ್ಡ್ ಟ್ರಂಪ್ ಸಮ್ಮುಖದಲ್ಲಿ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಅಮೆರಿಕದಲ್ಲಿ ಇರುವ 50 ಸಾವಿರಕ್ಕೂ ಅಧಿಕ ಭಾರತೀಯ ಸಂಜಾತರನ್ನು ಉದ್ದೇಶಿಸಿ ಮಾತನಾಡಿದ್ದರು.
ಈ ಕುರಿತು ರಾಜ್ಯಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿದೇಶಾಂಗ ಇಲಾಖೆ ರಾಜ್ಯ ಖಾತೆ ಸಚಿವ ವಿ.ಮುರುಳೀಧರನ್, 'ಅಮೆರಿಕ ಮೂಲದ ಟೆಕ್ಸಾಸ್ ಇಂಡಿಯಾ ಫೊರಂ ಸಂಸ್ಥೆ 2019ರ ಸೆ.22ರಂದು ಹೌಡಿ ಮೋದಿ ಹೆಸರಿನ ಕಾರ್ಯಕ್ರಮ ಆಯೋಜಿಸಿತ್ತು. ಅಮೆರಿಕ ಪ್ರವಾಸದ ಭಾಗವಾಗಿ, ಆಯೋಜಕರ ಆಹ್ವಾನದ ಮೇರೆಗೆ ಪ್ರಧಾನಿ ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಭಾರತೀಯ ಸಮುದಾಯದ ಸದಸ್ಯರಾಗಿರುವ ಜುಗಲ್ ಮಲಾನಿ ಈ ಸಂಸ್ಥೆಯ ಮುಖ್ಯಸ್ಥ. ಕಾರ್ಯಕ್ರಮದ ಯಾವುದೇ ವೆಚ್ಚವನ್ನಾಗಲಿ ಅಥವಾ ಆಯೋಜಕರಿಗೆ ಯಾವುದೇ ಹಣಕಾಸಿನ ನೆರವನ್ನು ಸರ್ಕಾರ ನೀಡಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.