ಮೈಸೂರು, ಸೆ.18 (DaijiworldNews/HR): ಈ ಬಾರಿಯ ಮೈಸೂರು ದಸರಾವನ್ನು ಸರಳವಾಗಿ ಆಚರಿಸಲು ಮುಖ್ಯಮಂತ್ರಿಗಳ ಸೂಚನೆ ಇದ್ದು, ಈ ಹಿನ್ನೆಲೆಯಲ್ಲಿ ದುಂದು ವೆಚ್ಚದ ಪ್ರಶ್ನೆಯೇ ಇಲ್ಲ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ದಸರಾ ಕಾರ್ಯಕ್ರಮವು ಹತ್ತು ದಿನ ನಡೆಯುವುದರಿಂದ ಖರ್ಚು ವೆಚ್ಚಗಳು ಇರುತ್ತವೆ. ಇಷ್ಟಾದರೂ ಸಭೆಯಲ್ಲಿ ಸರಳ ಆಚರಣೆಗೆ ಒತ್ತು ನೀಡಿ ತೀರ್ಮಾನ ಕೈಗೊಳ್ಳುತ್ತೇವೆ. 5 ಕೋಟಿ ರೂ. ವನ್ನು ಮೂಡಾದವರು ಬಿಡುಗಡೆ ಮಾಡಿದ್ದಾರೆ ಎಂದರು.
ಇನ್ನು ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು ಸೇರಿದಂತೆ ಆಹ್ವಾನಿತರಾಗುತ್ತಿರುವ ಆಯಾ ಇಲಾಖೆಯ ತಲಾ ಒಬ್ಬರು ಉದ್ಘಾಟಕರ ಹೆಸರನ್ನು ಆಯ್ಕೆ ಮಾಡಿ ಕಳುಹಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಮೈಸೂರು ನಗರಕ್ಕೆ ಎಲ್ ಇ ಡಿ ಬೀದಿ ದೀಪ ಅಳವಡಿಸುವ ಸಂಬಂಧ ಬಹುವರ್ಷಗಳ ಬೇಡಿಕೆ ಇದೆ ಎಂದು ಶಾಸಕರಾದ ಎಲ್. ನಾಗೇಂದ್ರ , ಎಸ್.ಎ. ರಾಮದಾಸ್, ಸಂಸದರಾದ ಪ್ರತಾಪ್ ಸಿಂಹ ಸೇರಿದಂತೆ ಹಲವು ನಾಯಕರು ನನ್ನ ಬಳಿ ಚರ್ಚೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಂಪುಟದಲ್ಲಿ ಒಪ್ಪಿಗೆ ಪಡೆದು ಅನುಮೋದನೆ ಕೊಡಿಸಿದ್ದೇನೆ ಎಂದು ತಿಳಿಸಿದ್ದಾರೆ.