ನವದೆಹಲಿ, ಸೆ 18 (DaijiworldNews/PY): ಈ ಹಿಂದೆ ನಾನು ಅಬಕಾರಿ ಸಚಿವನಾಗಿ ಉತ್ತಮವಾಗಿ ಕೆಲಸ ಮಾಡಿದ್ದೇನೆ. ಈ ಬಾರಿ ನನಗೆ ಸಂಪುಟದಲ್ಲಿ ಅವಕಾಶ ನೀಡಿದರೆ ಸಿಎಂ ಬಿಎಸ್ವೈ ಹಾಗೂ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವಂತೆ ಕಾರ್ಯನಿರ್ವಹಿಸುತ್ತೇನೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅಬಕಾರಿ ಸಚಿವನಾಗಿದ್ದ ಸಮಯದಲ್ಲಿ ಸರ್ಕಾರ ನೀಡಿದ್ದ ಗುರಿಯನ್ನು ಮೀರಿ ಆದಾಯ ಹೆಚ್ಚಿಸಿದ್ದೇನೆ. ಈ ಬಾರಿ ಸಂಪುಟದಲ್ಲಿ ಅವಕಾಶ ಕಲ್ಪಿಸಿದರೆ ನಾನು ಉತ್ತಮವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ತಿಳಿಸಿದರು.
ಸಚಿವ ಸ್ಥಾನಕ್ಕಾಗಿ ನಾನು ಲಾಬಿ ನಡೆಸಿಲ್ಲ. ಎಲ್ಲರೂ ಕೂಡಾ ಪಕ್ಷದ ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ಬದ್ದರಾಗಬೇಕು. ಸಚಿವ ಸಂಪುಟ ವಿಸ್ತರಣೆಯ ವಿಚಾರವು ಸಿಎಂ ಅವರ ಪರಮಾಧಿಕಾರ ಎಂದರು.
ಕೇಂದ್ರ ಸಚಿವ ಸದಾನಂದ ಗೌಡ ಸೇರಿದಂತೆ ಅನೇಕರನ್ನು ಭೇಟಿ ಮಾಡಿದ್ದು, ಮಾತುಕತೆ ನಡೆಸಿದ್ದೇನೆ. ಅಲ್ಲದೇ, ಮಂತ್ರಿ ಸ್ಥಾನ ನೀಡುವುದು ಮುಖ್ಯಮಂತ್ರಿ ಹಾಗೂ ಹೈಕಮಾಂಡ್ನ ತೀರ್ಮಾನ ಎಂದು ತಿಳಿಸಿದರು.
ನಾಯಕತ್ವ ಬದಾವಣೆ ವಿಚಾರ ಕೇವಲ ಊಹಾಪೋಹ. ಸಿಎಂ ಬಿಎಸ್ವೈ ಅವರೇ ನಮ್ಮ ನಾಯಕ. ಅಲ್ಲದೇ, ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಕೀರ್ತಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.