ಮೈಸೂರು, ಸೆ 18 (DaijiworldNews/PY): ಕೇವಲ ಶಾಲೆಗಳು ಮಾತ್ರವೇ ಸೆಪ್ಟೆಂಬರ್ 21ರಿಂದ ತೆರೆಯಲಿವೆ. ಆದರೆ, ಕೇಂದ್ರದ ಗ್ರೀನ್ ಸಿಗ್ನಲ್ ಬರುವ ತನಕ ತರಗತಿಗಳ ಆರಂಭವಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.
1ರಿಂದ 10ನೇ ತರಗತಿಯ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಯು ಸೆ.30ರೊಳಗೆ ಪೂರ್ಣವಾಗಬೇಕು. ಇನ್ನು ಖಾಸಗಿ ಶಾಲೆಗಳು ಒಂದು ಟರ್ಮ್ ಫೀಸ್ ಮಾತ್ರವೇ ಪಡೆದುಕೊಳ್ಳಬೇಕು. ಈ ಸಂಬಂಧ ಸಮಸ್ಯೆ ಉಂಟಾದಲ್ಲಿ ಡಿಡಿಪಿಐ, ಬಿಇಒ ಕ್ರಮ ತೆಗೆದುಕೊಳ್ಳುತ್ತಾರೆ. ಸರ್ಕಾರದಿಂದ ಈಗಾಗಲೇ ಡಿಡಿಪಿಐ, ಬಿಇಒಗೆ ಸೂಚನೆ ನೀಡಿದ್ದೇವೆ. ಈ ಬಗ್ಗೆ ಯಾವುದೇ ರೀತಿಯಾದ ಸಮಸ್ಯೆ ಬಂದಲ್ಲಿ ಬಿಇಒ ಅವರನ್ನು ಸಮಪರ್ಕಿಸಿ ಎಂದು ಹೇಳಿದರು.
ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಯತ್ತ ಪೋಷಕರು ಮಕ್ಕಳನ್ನು ದಾಖಲಾತಿ ಮಾಡುತ್ತಿದ್ದು, ಸರ್ಕಾರಿ ಶಾಲೆಗಳಿಗೆ ಎಷ್ಟೇ ಮಕ್ಕಳು ದಾಖಲಾತಿಯಾದರೂ ಕೂಡಾ ಎಲ್ಲರಿಗೂ ಸೂಕ್ತವಾದ ವ್ಯವಸ್ಥೆ ಮಾಡುತ್ತೇವೆ. ಒಂದು ವೇಳೆ ಖಾಸಗಿ ಶಾಲೆಯಿಂದ ಟಿಸಿ ಕೊಡದಿದ್ದಲ್ಲಿ ಈ ಬಗ್ಗೆ ಬಿಇಒ ಅವರಿಂದ ಟಿಸಿ ಕೊಡಿಸುವಂತ ವ್ಯವಸ್ಥೆ ಮಾಡಿಸುತ್ತೇವೆ ಎಂದು ತಿಳಿಸಿದರು.
ಶಾಲೆ ಯಾವಾಗ ಪ್ರಾರಂಭವಾಗುತ್ತದೆ ಎಂದು ಮಕ್ಕಳು ಕೇಳುತ್ತಿದ್ದಾರೆ. ಆದರೆ, ಈ ವಿಚಾರದಲ್ಲಿ ಪೋಷಕರು ಆತಂಕದಲ್ಲಿದ್ದಾರೆ. ನಮ್ಮ ಇಲಾಖೆ ಇದನ್ನು ನಿವಾರಿಸುವಂತ ಕಾರ್ಯ ಮಾಡಲಿದೆ ಎಂದು ಹೇಳಿದರು.