ದಾವಣಗೆರೆ, ಸೆ.18 (DaijiworldNews/HR): ಕೊರೊನಾ ಲಾಕ್ ಡೌನ್ ಕಾರಣದಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ 1500 ಕೋಟಿ ರೂ. ನಷ್ಟವಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಎಂ. ಚಂದ್ರಪ್ಪ ತಿಳಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸ್ ಸಂಚಾರ ಇಲ್ಲದಿದ್ದ ಕಾರಣ ನಷ್ಟ ಸಂಭವಿಸಿದೆ. ರಾಜ್ಯ ಸರ್ಕಾರ 1350 ಕೋಟಿ ನೀಡಿದ್ದರಿಂದ ಸಿಬ್ಬಂದಿಯ ವೇತನಕ್ಕೆ ಅನುಕೂಲ ಆಗಿದೆ. ನಷ್ಟದ ನಡುವೆಯೂ ಸಿಬ್ಬಂದಿ ವೇತನ ನಿಲ್ಲಿಸಿಲ್ಲ ಎಂದರು.
ಇನ್ನು ಈಗಿನ ಮಾರ್ಗಸೂಚಿಯ ಅನ್ವಯ ಬಸ್ ಸಂಚಾರದಿಂದ ಡೀಸೆಲ್ ಖರ್ಚಿಗೂ ಆಗುವುದಿಲ್ಲ. ಹಾಗಾಗಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳೊಂದಿಗೆ ಎಲ್ಲಾ ಮಾರ್ಗದಲ್ಲಿ ಬಸ್ ಸಂಚಾರ ಪ್ರಾರಂಭಿಸುವಂತೆ ಸೂಚನೆ ನೀಡಲಾಗಿದ್ದು, ಆಂಧ್ರ ಪ್ರದೇಶ, ಗೋವಾ, ಮಹಾರಾಷ್ಟ್ರ ಅಂತರ ರಾಜ್ಯ ಬಸ್ ಸಂಚಾರಕ್ಕೆ ಅನುಮತಿ ದೊರೆತಿದೆ. ಬಸ್ ಸಂಚಾರ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
ಸಾರಿಗೆ ಸಂಸ್ಥೆ ಸೇವಾ ಮನೋಭಾವ ಹೊಂದಿದ್ದು, ನಷ್ಟವಾದರೂ ಕೂಡ ಸಾರ್ವಜನಿಕರಿಗೆ ಸೇವೆಯನ್ನು ನೀಡಲಾಗುವುದು. ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.