ನವದೆಹಲಿ,ಸೆ.18 (DaijiworldNews/HR): ವಿರೋಧ ಪಕ್ಷಗಳ ಆಕ್ಷೇಪದ ನಡುವೆಯೂ ಲೋಕಸಭೆಯಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಎರಡು ಮಸೂದೆಗಳು ಅಂಗೀಕಾರಗೊಂಡಿದೆ.
ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ ಹಾಗೂ ಬೆಲೆ ಖಾತರಿ ಮತ್ತು ಕೃಷಿ ಸೇವೆಗಳಿಗೆ ರೈತರ ಒಪ್ಪಿಗೆ (ಸಬಲೀಕರಣ ಮತ್ತು ರಕ್ಷಣೆ) ಮಸೂದೆಯಾಗಿದ್ದು, ಈ ಮಸೂದೆಗೆ ಕಾಂಗ್ರೆಸ್, ಡಿಎಂಕೆ ಹಾಗೂ ರೆವಲೂಷನರಿ ಸೋಷಿಯಲಿಸ್ಟ್ ಪಾರ್ಟಿ ಸದಸ್ಯರು ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು.
ಈ ನಡುವೆಯೇ, ಮಸೂದೆಗೆ ಸಂಬಂಧಿಸಿದಂತೆ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಇದಕ್ಕೆ ಬೇಸರ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳು ರೈತರನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಈ ಮಾತುಗಳಿಗೆ ಕಿವಿಗೊಡಬೇಡಿ ಎಂದು ಹೇಳಿದರು.
ಈ ಮಸೂದೆ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಹಾರದಲ್ಲಿ ವಿವಿಧ ರೈಲ್ವೆ ಯೋಜನೆಗಳ ಉದ್ಘಾಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ಈ ಮಸೂದೆ ರೈತರಿಗೆ ಬಹಳ ರೀತಿಯಲ್ಲಿ ಅನುಕೂಲವಾಗಲಿದೆ. ಮಧ್ಯವರ್ತಿಗಳು ಹಾಗೂ ವಿವಿಧ ಸಮಸ್ಯೆಗಳಿಂದ ರೈತರು ಹಾಗೂ ಕೃಷಿ ಕ್ಷೇತ್ರಕ್ಕೆ ಮುಕ್ತಿ ನೀಡಲಿವೆ. ಈಗ ಚಾಲ್ತಿಯಲ್ಲಿರುವ ಕನಿಷ್ಠ ಬೆಂಬಲ ಬೆಲೆ, ಸರ್ಕಾರವೇ ಕೃಷಿ ಉತ್ಪನ್ನಗಳ ಖರೀದಿಯಂತಹ ವ್ಯವಸ್ಥೆ ಮುಂದುವರಿಯಲಿವೆ. ಈ ಮಸೂದೆಗಳ ಪರಿಣಾಮ ರೈತರಿಗೆ ಇನ್ನೂ ಹಲವಾರು ಸೌಲಭ್ಯಗಳು, ಅನುಕೂಲಗಳು ದೊರೆಯಲಿವೆ ಎಂದು ಹೇಳಿದರು.