ಬೆಂಗಳೂರು, ಸೆ 18 (DaijiworldNews/PY): ಪ್ರತಿಭಟನಾ ನಿರತ ವೈದ್ಯರ ಜತೆ ನಡೆಸಿದ ಸಭೆ ಯಶಸ್ವಿಯಾಗಿದೆ. ವೈದ್ಯರ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಗೆ ನೀಡಲಾಗಿದೆ ಎಂದು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪ್ರತಿಭಟನಾ ನಿರತ ವೈದ್ಯರ ಜತೆ ನಡೆಸಿದ ಸಭೆ ಯಶಸ್ವಿಯಾಗಿದೆ. ವೈದ್ಯರ ಬೇಡಿಕೆಗಳನ್ನು ಈಡೇರಿಸಲು ಒಪ್ಪಿಗೆ ನೀಡಲಾಗಿದೆ. ಈ ಐತಿಹಾಸಿಕ ನಿರ್ಧಾರಕ್ಕೆ ಕಾರಣೀಭೂತರಾದ ಮಾನ್ಯ ಮುಖ್ಯಮಂತ್ರಿ ಶ್ರೀ ಸಿಎಂ ಬಿಎಸ್ವೈ ಅವರಿಗೆ ಅಭಿನಂದನೆಗಳು ಎಂದಿದ್ದಾರೆ.
ಹಾಗೆಯೇ, ಮುಷ್ಕರವನ್ನು ಕೈಬಿಟ್ಟ ವೈದ್ಯರಿಗೂ ಸರ್ಕಾರದ ಪರವಾಗಿ ಅಭಿನಂದನೆಗಳು. ಜನಸಾಮಾನ್ಯರ ಹಿತ ಕಾಪಾಡಲು ಸರ್ಕಾರ ಯಾವತ್ತೂ ಬದ್ಧವಾಗಿದ್ದು, ಕೋವಿಡ್ ಸಂಬಂಧಿತ ಸೇವೆಗಳು ಅಭಾದಿತವಾಗಿ ಮುಂದುವರಿಯಲಿವೆ ಎಂದು ತಿಳಿಸಿದ್ದಾರೆ.
ವಿವಿಧ ಬೇಡಿಕೆಯ ಈಡೇರಿಕೆಗಾಗಿ ಸರ್ಕಾರಿ ವೈದ್ಯರು ಒಂದು ವಾರಗಳ ಕಾಲ ಪ್ರತಿಭಟನೆ ನಡೆಸುವುದು ಎಂದು ತೀರ್ಮಾನ ಮಾಡಿದ್ದರು. ಈ ಹಿನ್ನೆಲೆ, ಯಾವುದೇ ಕಾರಣಕ್ಕೂ ವೈದ್ಯರು ಮುಷ್ಕರ ಮಾಡಬಾರದು. ಮುಷ್ಕರ ಕೈಬಿಡಿ ಎಂದು ಮನವಿ ಮಾಡಿದ್ದರು.