ನವದೆಹಲಿ, ಸೆ. 18 (DaijiworldNews/SM): ರಾಜ್ಯ ರಾಜಕೀಯದಲ್ಲಿ ಸದ್ಯ ಸಂಪುಟ ವಿಸ್ತರಣೆಯದ್ದೇ ಸುದ್ದಿ. ಇದೀಗ ಸಿಎಂ ಬಿಎಸ್. ಯಡಿಯೂರಪ್ಪ ದೆಹಲಿಗೆ ತೆರಳಿ ಹೈಕಮಾಂಡ್ ಭೆಟಿಯಾಗಿದ್ದು, ಇದೀಗ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಪ್ರಧಾನಿ ನರೇಂದ್ರ ಮೋದಿಯವರನ್ನು ಬಿಎಸ್ ಯಡಿಯೂರಪ್ಪ ಭೇಟಿಯಾಗಿದ್ದಾರೆ. ಅವರೊಂದಿಗೆ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದೀಗ ಹೈಕಮಾಂಡ್ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ನೀಡಿದ್ದು, ಅಧಿವೇಶನದ ಬಳಿಕ ಸಂಪುಟ ವಿಸ್ತರಣೆಯಾಗಲಿದೆ. ಇನ್ನು ಸಂಪುಟ ಪುನರಚನೆಗೆ ಹೈಕಮಾಂಡ್ ಒಲವುಹೊಂದಿಲ್ಲ.
ಸಚಿವ ಸಂಪುಟಕ್ಕೆ 3-4 ಸಚಿವರು ಸೇರ್ಪಡೆಯಾಗುವ ಸಾಧ್ಯತೆ ಇದೆ. ಸದ್ಯ ಇಬ್ಬರು ಸಚಿವರ ಹೆಸರನ್ನು ಹೈಕಮಾಂಡ್ ಫೈನಲ್ ಮಾಡಿದೆ. ಆರ್. ಶಂಕರ್, ಎಂ.ಟಿ. ಬಿ ನಾಗರಾಜ್ ಅವರ ಹೆಸರುಗಳನ್ನು ಹೈಕಮಾಂಡ್ ಅಂತಿಮಗೊಳಿಸಿದೆ. ಉಳಿದವರ ಹೆಸರು ನಾಳೆ ಘೋಷಣೆಯಾಗುವ ಸಾಧ್ಯತೆ ಇದೆ.
ಇನ್ನು ಹೈಕಮಾಂಡ್ ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಬಿಎಸ್ ವೈ, ಮೊದಲು ಸಂಪುಟ ವಿಸ್ತರಣೆ ನಡೆಸಿ ಬಳಿಕ ಅಧಿವೇಶನ ನಡೆಸಲು ಯೋಚಿಸಿದ್ದೆ. ಆದರೆ, ಇದೀಗ ಹೈಕಮಾಂಡ್ ನಿರ್ಧಾರದಂತೆ ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಪ್ರತಿಕ್ರಿಯಿಸಿದ್ದಾರೆ.