ತಿರುವನಂತಪುರಂ, ಸೆ. 18 (DaijiworldNews/SM): ಕೇರಳ-ಕರ್ನಾಟಕ ನಡುವೆ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂಬ ಗಡಿ ಭಾಗದ ಜನತೆಯ ಒತ್ತಾಯಕ್ಕೆ ಇದೀಗ ಜಯ ಸಿಕ್ಕಿದ್ದು, ಮುಕ್ತ ಸಂಚಾರಕ್ಕೆ ಕೇರಳ ಹೈಕೋರ್ಟ್ ಆದೇಶ ನೀಡಿದೆ.
ಕಾಸರಗೋಡು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಜನರ ಮುಕ್ತ ಸಂಚಾರ, ಸರಕು ಸಾಗಾಟ ಮಾಡುವಂತೆ ಸೂಚನೆ ನೀಡಲಾಗಿದೆ.
ಕೊವಿಡ್ ಹಿನ್ನಲೆ ಕೇರಳ-ಕರ್ನಾಟಕ ಗಡಿ ರಸ್ತೆ ಬಂದ್ಗೊಳಿಸಲಾಗಿತ್ತು. ಅನ್ಲಾಕ್-೪ರಲ್ಲಿ ಕೇಂದ್ರ ಗೃಹ ಸಚಿವಾಲಯ ಹೊರಡಿಸಿದ್ದ ಮಾರ್ಗಸೂಚಿಯ ಪ್ರಕಾರ ಅಂತರಾಜ್ಯ ಮುಕ್ತ ಸಂಚಾರಕ್ಕೆ ಅವಕಾಶ ಕಲ್ಪಿಸಿ ಸೂಚಿಸಲಾಗಿತ್ತು. ಆದರೆ, ಕೇರಳ ಕರ್ನಾಟ ನಡುವೆ ಮುಕ್ತ ಸಂಚಾರಕ್ಕೆ ಅವಕಾಶ ಇರಲಿಲ್ಲ. ಕೇರಳ ಸರಕಾರದ ನಿಲುವನ್ನು ಪ್ರಶ್ನಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಶ್ರೀಕಾಂತ್ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ತಕ್ಷಣಕ್ಕೆ ಪ್ರಮುಖ ನಾಲ್ಕು ಗಡಿಗಳಾದ ತಲಪಾಡಿ, ಮಾಣಿಮೂಲೆ, ಬಂದಡ್ಕ, ಜಾಲ್ಸೂರು ಸಂಚಾರಕ್ಕೆ ಮುಕ್ತಗೊಳಿಸಿ ಈ ಹಿಂದೆಯೇ ಆದೇಶ ನೀಡಿತ್ತು.
ಇದೀಗ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಕೇರಳ-ಕರ್ನಾಟಕ ನಡುವೆ ಮುಕ್ತ ಸಂಚಾರಕ್ಕೆ ಅವಕಾಶ ನೀಡಿ ಆದೇಶ ಹೊರಡಿಸಿದೆ. ಆ ಮೂಲಕ ಗಡಿ ಭಾಗದ ಜನತೆಯ ಆರು ತಿಂಗಳ ಬೇಡಿಕೆ ಇದೀಗ ಈಡೇರಿದಂತಾಗಿದೆ. ಕಾಸರಗೋಡು-ದ.ಕ. ಜಿಲ್ಲೆಗಳ ನಡುವೆ ಇನ್ಮುಂದು ಮುಕ್ತ ಸಂಚಾರ ನಡೆಸಬಹುದಾಗಿದೆ. ಇನ್ನು ಸೆಪ್ಟೆಂಬರ್ ೨೧ರಿಂದ ಮಂಗಳೂರು-ಕಾಸರಗೋಡು ಸರಕಾರಿ ಬಸ್ ಸಂಚಾರ ಕೂಡ ಆರಂಭಗೊಳ್ಳಲಿದೆ.