ಶ್ರೀನಗರ, ಸೆ 19 (DaijiworldNews/PY): ಜು.18ರಂದು ಶೋಪಿಯಾನ್ ಜಿಲ್ಲೆಯಲ್ಲಿ ನಡೆದಿದ್ದ ನಕಲಿ ಎನ್ಕೌಂಟರ್ನ ಸಂಧರ್ಭ ಯೋಧರು ಸಶಸ್ತ್ರ ಪಡೆಗಳ ಎಎಫ್ಎಸ್ಪಿಎ ಉಲ್ಲಂಘನೆ ಮಾಡಿರುವುದಕ್ಕೆ ಪ್ರಾಥಮಿಕ ಸಾಕ್ಷ್ಯ ದೊರೆತಿದೆ ಎಂದು ಭಾರತೀಯ ಸೇನೆ ಹೇಳಿದೆ.
ಸೇನೆಯು, ಈ ಘಟನೆಗೆ ಸಂಬಂಧಪಟ್ಟಂತೆ ಆರೋಪಿತ ಸಿಬ್ಬಂದಿಯ ವಿರುದ್ದ ಸೇನಾ ಕಾಯ್ದೆಯಡಿಯಲ್ಲಿ ಕ್ರಮ ತೆಗೆದುಕೊಳ್ಳಲು ಸಿದ್ದವಾಗಿದ್ದು, ಪ್ರಕ್ರಿಯೆ ಪ್ರಾರಂಭಿಸಿದೆ.
ಜಮ್ಮು-ಕಾಶ್ಮೀರದ ಶೋಪಿಯಾನ್ನ ಜಿಲ್ಲೆಯ ಅಮ್ಶಿಪೋರಾ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನ ವಿಚಾರವಾಗಿ ಸೇನೆಯು ತನಿಖೆ ನಡೆಸಲು ಆದೇಶ ನೀಡಿತ್ತು. ಈ ಎನ್ಕೌಂಟರ್ನ ಸಂದರ್ಭ ಮೂರು ಅಪರಿಚಿತ ಶಂಕಿತ ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿಯನ್ನು ಸೇನೆ ನೀಡಿತ್ತು.
ಕಾರ್ಯಾಚರಣೆಯ ಸಂದರ್ಭ ಎಫ್ಎಸ್ಪಿಎ 1990ರಡಿ ನೀಡಲಾಗಿದ್ದ ಅಧಿಕಾರವನ್ನು ಉಲ್ಲಂಘನೆ ಮಾಡಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆಯ ಸಂದರ್ಭ ಕೆಲವು ಪ್ರಾಥಮಿಕ ಸಾಕ್ಷ್ಯಗಳು ಪತ್ತೆಯಾಗಿವೆ ಎಂಬುದಾಗಿ ರಕ್ಷಣಾ ಇಲಾಖೆ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ಹೇಳಿದ್ದಾರೆ.
ಎನ್ಕೌಂಟರ್ನ ಸಂದರ್ಭ ಮೃತಪಟ್ಟ ಮೂವರು ಶಂಕಿತ ಭಯೋತ್ಪಾದಕರು ರಜೌರಿ ಜಿಲ್ಲೆಯ ಅಬ್ರಾರ್ ಅಹ್ಮದ್ ಖಾನ್ (18), ಇಮ್ತಿಯಾಜ್ ಹುಸೈನ್ (26) ಹಾಗೂ ಮೊಹಮ್ಮದ್ ಇಬ್ರಾರ್ (21) ಎನ್ನುವ ವಿಚಾರವನ್ನು ಸೇನೆ ಒಪ್ಪಿದೆ. ಮೂರು ಮಂದಿಯ ಡಿಎನ್ಎ ಪರೀಕ್ಷಾ ವರದಿ ಇನ್ನಷ್ಟೇರಬೇಕಿದೆ ಎಂದು ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದ ಶೋಪಿಯಾನ್ನ ಜಿಲ್ಲೆಯ ಅಮ್ಶಿಪೋರಾ ಪ್ರದೇಶದಲ್ಲಿ ನಡೆದ ಎನ್ಕೌಂಟರ್ನ ನಂತರ ಶೋಪಿಯಾನ್ ಪ್ರದೇಶವೊಂದರಲ್ಲಿ ಕೆಲಸ ಮಾಡುತ್ತಿದ್ದ ಮೂರು ಕುಟುಂಬಗಳು, ತಮ್ಮ ಕುಟುಂಬದ ಸದಸ್ಯರು ನಾಪತ್ತೆಯಾಗಿದ್ದರು ಎಂದು ಪೊಲೀಸರಿಗೆ ದೂರು ಸಲ್ಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಿಚಿತ ಡಿಎನ್ಎ ಜೊತೆ ಹೋಲಿಕೆ ಮಾಡಲು ಆ.13ರಂದು ಕುಟುಂಬದ ಸದಸ್ಯರ ಡಿಎನ್ಎ ಮಾದರಿ ಪಡೆಯಲಾಗಿತ್ತು.