ನವದೆಹಲಿ, ಸೆ 19 (DaijiworldNews/PY): ಹೊರ ರಾಜ್ಯಗಳಿಗೆ ವೈದ್ಯಕೀಯ ಆಮ್ಲಜನಕದ ಸರಬರಾಜಿಗೆ ಯಾವುದೇ ರೀತಿಯಾದ ನಿರ್ಬಂಧ ವಿಧಿಸಬೇಡಿ ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ.
ಸಾಂದರ್ಭಿಕ ಚಿತ್ರ
ವಿಪತ್ತು ನಿರ್ವಹಣಾ ಕಾಯ್ದೆ 2005 ಅನ್ನು ಉಪಯೋಗಿಸಿಕೊಂಡು ದೇಶದ ಕೆಲವು ಭಾಗಗಳಲ್ಲಿ ವೈದ್ಯಕೀಯ ಆಮ್ಲಜನಕದ ಸರಬರಾಜಿಗೆ ನಿರ್ಬಂಧ ಹೇರಿರುವ ಬಗ್ಗೆ ವರದಿಗಳು ಪ್ರಕಟವಾದ ಬೆನ್ನಲ್ಲೇ, ಕೇಂದ್ರ ಸರ್ಕಾರದ ಗೃಹ ಸಚಿವಾಲಯವು ಹೊರರಾಜ್ಯಗಳಿಗೆ ವೈದ್ಯಕೀಯ ಆಮ್ಲಜನಕದ ಸರಬರಾಜಿಗೆ ಯಾವುದೇ ರೀತಿಯಾದ ನಿರ್ಬಂಧ ವಿಧಿಸಬೇಡಿ ಎಂದು ಸೂಚಿಸಿದೆ.
ಸಚಿವಾಲಯದ ಕಾರ್ಯದರ್ಶಿ ಅಜಯ್ ಭಲ್ಲಾ ರಾಜ್ಯಗಳಿಗೆ ಪತ್ರದ ಮೂಲಕ ಸೂಚನೆ ನೀಡಿದ್ದು, ಹೊರರಾಜ್ಯಗಳಿಗೆ ವೈದ್ಯಕೀಯ ಆಮ್ಲಜನಕದ ಸರಬರಾಜಿಗೆ ನಿರ್ಬಂಧಿಸಬೇಡಿ. ಅಲ್ಲದೇ, ರಾಜ್ಯದೊಳಗಿರುವ ಆಸ್ಪತ್ರೆಗಳಿಗಷ್ಟೆ ಆಮ್ಲಜನಕ ಪೂರೈಕೆ ಮಾಡಬೇಕು ಎನ್ನುವಂತ ಆದೇಶ ನೀಡುವಂತಿಲ್ಲ ಎಂದು ತಿಳಿಸಿದ್ದಾರೆ.