ನವದೆಹಲಿ, ಸೆ 19 (DaijiworldNews/PY): ಕೊರೊನಾ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳು ಯಶಸ್ವಿಯಾದರೆ 2021ರ ಮೊದಲಾರ್ಧದ ಒಳಗೆ ಕೊರೊನಾ ಲಸಿಕೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಆರೋಗ್ಯ ಸಚಿವ ಅಶ್ವಿನಿ ಚೌಬೆ ಶುಕ್ರವಾರ ಲೋಕಸಭೆಗೆ ಮಾಹಿತಿ ನೀಡಿದರು.
ಕೊರೊನಾ ಲಸಿಕೆ ಯಾವಾಗ ಲಭ್ಯವಾಗುತ್ತದೆ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈವರೆಗೆ ಯಾವುದೇ ಲಸಿಕೆ ತಯಾರಕರೊಂದಿಗೆ ಮುಂಗಡ ಖರೀದಿ ಬಗ್ಗೆ ಒಪ್ಪಂದ ಮಾಡಿಕೊಂಡಿಲ್ಲ ಎಂದು ತಿಳಿಸಿದ್ದಾರೆ.
ಐಎಇಎಂಆರ್ ಹಾಗೂ ಕ್ಯಾಡಿಲಾ ಹೆಲ್ತ್ಕೇರ್ ಲಿಮಿಟೆಡ್ನ ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಸ್ಥಳೀಯವಾಗಿ ಅಭಿವೃದ್ದಿಪಡಿಸಿದ ಲಸಿಕೆಗಳ ಮೊದಲ ಹಂತದ ಕ್ಲಿನಿಕಲ್ ಪ್ರಯೋಗ ಮುಗಿದಿದ್ದು, ಎರಡೂ ಲಸಿಕೆಗಳು ಸುರಕ್ಷಿತ ಎನ್ನುವ ವಿಚಾರ ದೃಢಪಟ್ಟಿದೆ. ಈಗ ಇಮ್ಯುನೊಜೆಸಿಟಿ ಪರೀಕ್ಷೆ ಹಾಗೂ ಎರಡನೇ ಹಂತದ ಕ್ಲಿನಿಕಲ್ ಪ್ರಯೋಗಗಳು ನಡೆಯುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.
ಪುಣೆಯ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಅಹಮದಾಬಾದ್ನ ಕ್ಯಾಡಿಲಾ ಹೆಲ್ತ್ಕೇರ್ ಲಿಮಿಟೆಡ್, ಹೈದರಾಬಾದ್ನ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್, ಹೈದರಾಬಾದ್ನಲ್ಲಿ ಬಯೋಲಾಜಿಕಲ್ ಇ ಲಿಮಿಟೆಡ್, ಮುಂಬೈನ ರಿಲಯನ್ಸ್ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್, ಹೈದರಾಬಾದ್ನ ಅರಬಿಂದೋ ಫಾರ್ಮಾ ಲಿಮಿಟೆಡ್ ಮತ್ತು ಪುಣೆಯ ಜೆನ್ನೋವಾ ಬಯೋ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ನ ಕಂಪೆನಿಗಳಿಗೆ ಪ್ರಿಕ್ಲಿನಿಕಲ್ ಟೆಸ್ಟ್ ಸೇರಿದಂತೆ ತಪಾಸಣೆಗೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಕರ ಸಂಸ್ಥೆಯು ವಿಶ್ಲೇಷಣೆ ನಡೆಸಲು ಅನುಮತಿ ನೀಡಿದೆ. ಅಲ್ಲದೇ, ಅಗತ್ಯ ನೆರವು ನೀಡುವುದಾಗಿ ಐಸಿಎಂಆರ್ ತಿಳಿಸಿರುವುದಾಗಿ ಹೇಳಿದ್ದಾರೆ.
ಈ ಲಸಿಕೆ ಬ್ರೆಜಿಲ್ನಲ್ಲಿ ಕ್ಲಿನಿಕಲ್ ಪ್ರಯೋಗಗಳ ಮೂರನೇ ಹಂತಕ್ಕೆ ಒಳಗಾಗಿದೆ. ಹಂತ 2 ಮತ್ತು 3ರ ಅಧ್ಯಯನಕ್ಕೆ 14 ಕ್ಲಿನಿಕಲ್ ಪ್ರಯೋಗವನ್ನು ಐಸಿಎಂಆರ್ ಪ್ರಾರಂಭಿಸಿದೆ ಎಂದು ಸಚಿವರು ತಿಳಿಸಿದ್ದಾರೆ.