ಬೆಂಗಳೂರು, ಸೆ. 19 (DaijiworldNews/MB) : ''ನನ್ನನ್ನು ಕರ್ನಾಟಕದ ಡಿಸಿಎಂಯನ್ನಾಗಿ ಮಾಡು'' ಎಂದು ವಡಗೇರಾ ತಾಲೂಕಿನ ಗೋನಾಲ ಗ್ರಾಮದ ಗಡೇ ದುರ್ಗಾದೇವಿಗೆ ಪತ್ರ ಬರೆದಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀ ರಾಮುಲು ಇದೀಗ ಯೂ ಟರ್ನ್ ಹೊಡೆದಿದ್ದು, ''ದುರ್ಗಾದೇವಿ ಆಶೀರ್ವಾದ ಪಡೆಯಲು ತೆರಳಿದ್ದೆ ಅಷ್ಟೇ ರಾಜ್ಯದ ಉಪಮುಖ್ಯಮಂತ್ರಿಯಾಗಲು ಪ್ರಾರ್ಥಿಸಲು ಅಲ್ಲ'' ಎಂದು ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದೇವಸ್ಥಾನಕ್ಕೆ ಹೋಗುವುದು ತಪ್ಪೇ? ಆಶೀರ್ವಾದವನ್ನು ಬೇಡುವುದು ತಪ್ಪೇ?'' ಎಂದು ಪ್ರಶ್ನಿಸಿದ್ದು, ''ನಾನು ಎಲ್ಲರಂತೆ ದೇವಸ್ಥಾನಕ್ಕೆ ಹೋಗಿದ್ದೆ. ಎಲ್ಲರಂತೆ ನಾನು ಕೂಡ ದೇವರ ಆಶೀರ್ವಾದವನ್ನು ಕೋರಿದ್ದೇನೆ. ನಾನು ಉಪ ಮುಖ್ಯಮಂತ್ರಿಯಾಗಲು ಹೋಗಿಲ್ಲ. ಆದರೆ ಅದನ್ನು ಮಾಧ್ಯಮಗಳು ತಿರುಚಿ ಚಿತ್ರಿಸುತ್ತಿದೆ, ಇದು ತಪ್ಪು'' ಎಂದು ಹೇಳಿದ್ದಾರೆ.
ಗುರುವಾರ ಸಚಿವ ಬಿ .ಶ್ರೀರಾಮುಲು ಅವರು ಡಿಸಿಎಂ ಸ್ಥಾನ ನೀಡು ಎಂದು ಇಂಗ್ಲಿಷ್ನಲ್ಲಿ ದುರ್ಗಾ ದೇವಿಗೆ ಪತ್ರ ಬರೆದಿದ್ದರು. ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಇನ್ನು ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ರಾಮುಲು ಅವರು ಇದೇ ವೇಳೆ, ''ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಅಧಿಕಾರವಧಿ ಪೂರ್ಣಗೊಳಿಸಲಿದ್ದಾರೆ. ಅವರ ಸ್ಥಾನವನ್ನು ಪಡೆಯುವಂತವರು ರಾಜ್ಯದಲ್ಲಿ ಯಾರೂ ಇಲ್ಲ. ಸಿಎಂ ಬದಲಾವಣೆ ಕೇವಲ ಮಾಧ್ಯಮಗಳ ಸೃಷ್ಟಿ'' ಎಂದು ಹೇಳಿದರು.