ಹಾಸನ, ಸೆ 19 (DaijiworldNews/PY): ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಸರ್ವಾಧಿಕಾರಿ ಧೋರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅರಕಲಗೂಡು ಕ್ಷೇತ್ರದ ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಅವರು ರೇವಣ್ಣ ಅವರು ಸರ್ವಾಧಿಕಾರಿ ಮನೋಭಾವವನ್ನು ತ್ಯಜಿಸಬೇಕು ಎಂದು ಹೇಳಿದ್ದಾರೆ.
ಅರಕಲಗೂಡಿನಲ್ಲಿ ಮಾತನಾಡಿದ ಅವರು, ನನ್ನನ್ನು ಇತ್ತೀಚಿನ ಕೆಲವು ವಿದ್ಯಾಮಾನಗಳು ಘಾಸಿಗೊಳಿಸಿವೆ. ಈ ರೀತಿಯಾದರೆ ಪಕ್ಷ ಸಂಘಟನೆಯ ಕಾರ್ಯ ಮಾಡಲು ಆಗುವುದಿಲ್ಲ ಎಂದರು.
ಹೊನ್ನವಳ್ಳಿ ಸತೀಶ್ ಎಂಬವರನ್ನು ಹಾಸನ ಒಕ್ಕೂಟಕ್ಕೆ ನಿರ್ದೇಶಕನ್ನಾಗಿ ಆಯ್ಕೆ ಮಾಡಲಾಗಿದ್ದು, ಪಕ್ಷ ವಿರೋಧಿ ಚಟುವಟಿಕೆ ಮಾಡಿದವನ್ನೇ ಬೆಂಬಲ ಮಾಡಿದ್ದು, ಇದು ಆಘಾತಕಾರಿ ವಿಚಾರ. ಸತೀಶ್ ಅವರು ಹಣ ಇದ್ದವರೊಂದಿಗೆ ಹೋಗಿ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು.
ಈ ಬಗ್ಗೆ ನಾನು ದೇವೇಗೌಡರು ಹಾಗೂ ಹೆಚ್.ಡಿ.ಕುಮಾರಸ್ವಾಮಿ ಅವರ ಬಳಿ ಚರ್ಚೆ ನಡೆಸಿದ್ದೆ. ಆದರೂ ಅವರನ್ನೇ ಪರಿಗಣಿಸಿದ್ದಾರೆ. ಇದು ರೇವಣ್ಣ ಅವರ ಸರ್ವಾಧಿಕಾರಿ ಮನೋಭಾವವನ್ನು ತೋರಿಸಿದೆ. ಸಂಘಟನೆಯ ಜವಾಬ್ದಾರಿಯನ್ನು ವರಿಷ್ಠರಿಗೆ ಬಿಡುತ್ತೇನೆ ಎಂದರು.