ಬೆಂಗಳೂರು,ಸೆ.19(DaijiworldNews/HR): ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ದೆಹಲಿಗೆ ಹೋಗುತ್ತಿದ್ದಂತೆಯೇ ಇತ್ತ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದ ಬದಲಾವಣೆಯ ವದಂತಿಗಳು ಜೋರಾದ ಹಿನ್ನೆಲೆಯಲ್ಲಿ ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವರು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಮುಖ್ಯಮಂತ್ರಿ ಸ್ಥಾನದಲ್ಲಿ ಯಾವುದೇ ಬದಲಾವಣೆಗಳಿಲ್ಲ. ಪ್ರಧಾನಮಂತ್ರಿಗಳೊಂದಿಗೆ ಬೆಂಗಳೂರು ಅಭಿವೃದ್ಧಿ ಕುರಿತಂತೆ ಮಾತುಕತೆ ನಡೆಸಲಾಯಿತು. ಈ ವೇಳೆ ಮೋದಿಯವರು ಅಹಮದಾಬಾದ್ ಅನ್ನು ಪರಿವರ್ತಿಸುವಲ್ಲಿ ಅಸಾಧಾರಣ ಕೆಲಸ ಮಾಡಿದ ಅಧಿಕಾರಿಯ ಹೆಸರನ್ನು ಸೂಚಿಸಿದರು. ಅಲ್ಲದೆ, ನನ್ನ ಆರೋಗ್ಯವನ್ನೂ ವಿಚಾರಿಸಿದರು ಎಂದು ಹೇಳಿದ್ದಾರೆ.
ಇನ್ನು ಮೈಸೂರಿನಲ್ಲಿ ಮಾತನಾಡಿದ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು, ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರವು ಮಾಧ್ಯಮಗಳಲ್ಲಿ ಮಾತ್ರ ಚರ್ಚೆಯಾಗುತ್ತಿದೆ. ಬೇರೆಲ್ಲೂ ಇದರ ಬಗ್ಗೆ ಚರ್ಚೆಯಾಗುತ್ತಿಲ್ಲ. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವ ಯಾವುದೇ ಪ್ರಸ್ತಾಪ ನಡೆಯುತ್ತಿಲ್ಲ. ಅವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ ಎಂಬುದಾಗಿ ಸ್ಪಷ್ಟಪಡಿಸಿದ್ದಾರೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾತನಾಡಿ, ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುವ ಯಾವುದೇ ಸಾಧ್ಯತೆಗಳಿಲ್ಲ. ಶೇ.100ಕ್ಕೆ ನೂರರಷ್ಟು ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದರು.