ಬೆಂಗಳೂರು, ಸೆ. 19 (DaijiworldNews/MB) : ವಿಧಾನಮಂಡಲ ಅಧಿವೇಶನವು ಸೆ.21ರಿಂದ ಪ್ರಾರಂಭವಾಗಲಿದ್ದು ಉಭಯ ಸದನಗಳ ಪ್ರವೇಶ ಮಾಡುವವರಿಗೆ ಕೊರೊನಾ ಪರೀಕ್ಷೆ ನಡೆಸಿ ನೆಗೆಟಿವ್ ವರದಿ ಬರುವುದು ಕಡ್ಡಾಯವಾಗಿದೆ.
ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವಿಧಾನಪರಿಷತ್ ಕಾರ್ಯದರ್ಶಿ ಕೆ.ಆರ್.ಮಹಾಲಕ್ಷ್ಮಿ ಅವರು, ಪರಿಷತ್ ಸಭಾಂಗಣಕ್ಕೆ ಪ್ರವೇಶಿಸುವ ಎಲ್ಲರೂ 72 ಗಂಟೆಗಳೊಳಗಾಗಿ ಕೊರೊನಾ ಪರೀಕ್ಷೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ವರದಿ ನೆಗೆಟಿವ್ ಆದರೆ ಮಾತ್ರ ಪ್ರವೇಶ್ಕಕೆ ಅನುಮತಿ ನೀಡಲಾಗುತ್ತದೆ. ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆರೋಗ್ಯ ಇಲಾಖೆಯ ಮಾರ್ಗಸೂಚಿಗೆ ಅನುಸಾರವಾಗಿ ಈಗಾಗಲೇ ವಿಧಾನಪರಿಷತ್ ಆವರಣದಲ್ಲಿ ಕೊರೊನಾ ನಿಯಂತ್ರಣಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು 1254 ಪ್ರಶ್ನೆಗಳನ್ನು ಸದಸ್ಯರಿಂದ ಸ್ವೀಕಾರ ಮಾಡಲಾಗಿದೆ. ವಿಧಾನಪರಿಷತ್ನಲ್ಲಿ ಕಳೆದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಅಂಗೀಕಾರಗೊಂಡ 9 ವಿಧೇಯಕಗಳ ಮಂಡನೆ ಬಾಕಿ ಉಳಿದಿದ್ದು ಈ ಪೈಕಿ ಎರಡು ವಿಧೇಯಕಗಳಿಗೆ ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಉಳಿದ 7 ವಿಧೇಯಕ ಮಂಡನೆಯಾಗಲಿದೆ. ಸದಸ್ಯರ ಖಾಸಗಿ ಕಲಾಪಕ್ಕೂ ಅವಕಾಶವಿದೆ ಎಂದು ಹೇಳಿದ್ದಾರೆ.