ನವದೆಹಲಿ, ಸೆ 19 (DaijiworldNews/PY): ಸಂಪುಟ ವಿಸ್ತರಣೆಯನ್ನು ವಿಧಾನಮಂಡಲದ ಅಧಿವೇಶನದ ಮುನ್ನ ಮಾಡಬೇಕೆಂದುಕೊಂಡಿದ್ದು, ಇದಕ್ಕೆ ವರಿಷ್ಠರ ಅನುಮತಿ ಹಾಗೂ ಸಹಮತಿ ದೊರೆತ ತಕ್ಷಣ ಸಂಪುಟ ವಿಸ್ತರಣೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ಶನಿವಾರ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಈ ವಿಚಾರವಾಗಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ನಡೆಸಿ ಸಂಜೆಯ ವೇಳೆಗೆ ಸೂಚನೆ ನೀಡುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದೇನೆ ಎಂದು ಹೇಳಿದರು.
ಶುಕ್ರವಾರದಂದು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದು, ರಾಜ್ಯದ ಅಭಿವೃದ್ದಿ ಬಗ್ಗೆ ಮಾತಾನಡಿದ್ದೇನೆ. ಈ ಬಗ್ಗೆ ಪ್ರಧಾನಿ ಮೋದಿ ಅವರು ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದು, ಕೆಲವೇ ದಿನಗಳಲ್ಲಿ ಬೇಡಿಕೆಗಳಿಗೆ ಗ್ರೀನ್ ಸಿಗ್ನಲ್ ದೊರೆಯಲಿದೆ ಎಂದು ತಿಳಿಸಿದರು.
ಅಲ್ಲದೇ, ಕೇಂದ್ರದ ಹಲವು ಸಚಿವರನ್ನು ಕೂಡಾ ಭೇಟಿ ಮಾಡಿದ್ದು, ವಿವಿಧ ಯೋಜನೆಗಳ ವಿಚಾರವಾಗಿ ಸನುಮೋದನೆ ಹಾಗೂ ಮಂಜೂರಾತಿಗಾಗಿ ಮನವಿ ಸಲ್ಲಿಸಿದ್ದೇನೆ. ಎಲ್ಲಾ ಸಚಿವರು ಕೂಡಾ ಸ್ಪಂದಿಸಿದ್ದಾರೆ, ಈ ಬಾರಿಯ ದೆಹಲಿ ಭೇಟಿ ಸಫಲವಾಗಿದೆ ಎಂದು ಹೇಳಿದರು.