ಕೊಪ್ಪಳ, ಸೆ. 19 (DaijiworldNews/MB) : ದೇಶದಲ್ಲಿ ಹದಗೆಟ್ಟಿದ್ದ ಆರ್ಥಿಕ ಪರಿಸ್ಥಿತಿಗೆ ಕೊರೊನಾ ಸೋಂಕು, ಲಾಕ್ಡೌನ್ ಮತ್ತಷ್ಟು ಕೊಡಲಿ ಏಟು ನೀಡಿದೆ. ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಲ್ಲೇ ಇರುವ ಈ ಸಂದರ್ಭದಲ್ಲಿ ಶಿಕ್ಷಕರ ಸ್ಥಿತಿಯಂತೂ ಶೋಚನೀಯವಾಗಿದೆ. ಶಿಕ್ಷಕರು ವೇತನವಿಲ್ಲದೆ ಪರದಾಡುವಂತಾಗಿದೆ. ಈ ನಡುವೆ 22 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ದುಡಿದು ಅತ್ಯುತ್ತಮ ಶಿಕ್ಷಕ ಪ್ರಶಂಸೆಗೂ ಪಾತ್ರರಾಗಿರುವ ಶಿಕ್ಷಕರೊಬ್ಬರು ಜೀವನ ಸಾಗಿಸಲು ಟೀ ಅಂಗಡಿ ತೆರೆದಿದ್ದಾರೆ.
ಕೊರೊನಾ ಸಾಂಕ್ರಮಿಕ ಲಾಕ್ಡೌನ್ ಸಂದರ್ಭದಲ್ಲಿ ತಮ್ಮ ಕೆಲಸವನ್ನು ಕಳೆದುಕೊಂಡ ಕರ್ನೂಲ್ನ ಕಟ್ಟಮಂಚಿ ರಾಮಲಿಂಗರೆಡ್ಡಿ ವಸತಿ ಶಾಲೆಯಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದ ವೇಣುಗೋಪಾಲ್ ಎಂಬುವವರು ಕೃಷ್ಣನಗರ ಬಳಿಯಿರುವ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಚಹಾ ಅಂಗಡಿ ಆರಂಭಿಸಿದ್ದಾರೆ.
ವೇಣುಗೋಪಾಲ್ ಅವರು 1994ರಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೊರೊನಾ ಕಾರಣದಿಂದಾಗಿ ಕಡಿಮೆ ವೇತನ ಪಡೆದು ಕೆಲಸ ಮಾಡುವಂತೆ ಶಾಲಾ ಆಡಳಿತ ಮಂಡಳಿ ತಿಳಿಸಿದ ಕಾರಣದಿಂದಾಗಿ ಬೇರೆ ದಾರಿ ತೋರದೆ ಕೆಲಸವನ್ನೇ ತೊರೆದ ಪ್ರಾಂಶುಪಾಲ ವೇಣುಗೋಪಾಲ್ ಅವರಿಗೆ ಪತ್ನಿ ಅಂಗಡಿ ತೆರೆಯಲು ಹೇಳಿದ್ದು ದೊಡ್ಡ ಮಟ್ಟದ ಬಂಡವಾಳ ಹೂಡುವಷ್ಟು ಆರ್ಥಿಕವಾಗಿ ಸಬಲರಲ್ಲ ಎಂಬ ಕಾರಣಕ್ಕೆ ವೇಣುಗೋಪಾಲ್ ಅವರು ಟೀ ಅಂಗಡಿ ತೆರೆದಿದ್ದಾರೆ ಎಂದು ವರದಿ ತಿಳಿಸಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ವೇಣುಗೋಪಾಲ್ ಅವರು, ಆಗಸ್ಟ್ ಮೊದಲ ವಾರದಲ್ಲಿ ಸ್ನೇಹಿತನಿಂದ ರೂ.1 ಲಕ್ಷ ಸಾಲ ಪಡೆದು ಕೊಂಡು ಅಂಗಡಿ ಆರಂಭಿಸಿದ್ದು ಸ್ಕೂಲ್ ಮಾಸ್ಟರ್ನಿಂದ ಈಗ ಟೀ ಮಾಸ್ಟರ್ ಆಗಿದ್ದೇನೆ. ಪ್ರತಿದಿನ ರೂ.500-600ರವರೆಗೂ ಸಂಪಾದನೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.