ಚಂಡೀಗಡ, ಸೆ. 19 (DaijiworldNews/MB) : ಕೃಷಿ ಮಸೂದೆಗಳಿಗೆ ಪಂಜಾಬ್ನಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು ಪಂಜಾಬ್ನ ಮುಕ್ತಸರದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತರೊಬ್ಬರು ವಿಷಕಾರಿ ವಸ್ತು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ರೈತ ಮಾನ್ಸಾ ಜಿಲ್ಲೆಯ ಅಕ್ಕಾನವಾಲಿ ಗ್ರಾಮದ ನಿವಾಸಿಯಾಗಿರುವ ಪ್ರೀತಮ್ ಸಿಂಗ್ (70) ಎಂದು ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ವಿಷಕಾರಿ ವಸ್ತು ಸೇವಿಸಿ ಅಸ್ವಸ್ಥಗೊಂಡಿದ್ದ ಪ್ರೀತಮ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಅವರ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದಿಲ್ಲ. ಅವರು ಕೃಷಿ ಮಸೂದೆಯನ್ನು ತೀವ್ರವಾಗಿ ವಿರೋಧಿಸಿ ಪ್ರತಿಭಟನೆಗೆ ಇಳಿದಿದ್ದರು ಎಂದು ತಿಳಿಸಿದ್ದಾರೆ.
ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಸೆಪ್ಟೆಂಬರ್ 15ರಿಂದ ಬಾದಲ್ ಗ್ರಾಮದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಈ ಪ್ರತಿಭಟನೆಯಲ್ಲಿ ಪ್ರೀತಮ್ ಸಿಂಗ್ ಭಾಗವಹಿಸಿದ್ದರು. ಅವರ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಭಾರತೀಯ ಕಿಸಾನ್ ಯೂನಿಯನ್ನ ಪ್ರಧಾನ ಕಾರ್ಯದರ್ಶಿ ಸುಖದೇವ್ ಸಿಂಗ್ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.