ತುಮಕೂರು, ಸೆ 19 (DaijiworldNews/PY): ಕೊರೊನಾ ನಿರ್ವಹಣೆ ಮಾಡುವುದರಲ್ಲಿ ಸರ್ಕಾರ ವಿಫಲವಾಗಿದೆ ಎಂದು ಹೇಳಿರುವ ವಿರೋಧ ಪಕ್ಷದವರ ಹೇಳಿಕೆಗೆ ಆಧಾರವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ತುಮಕೂರಿನ ಅಗಳಕೋಟೆಯಲ್ಲಿ ಸಿದ್ಧಾರ್ಥ ಮೆಡಿಕಲ್ ಕಾಲೇಜಿನಲ್ಲಿ ಕೊರೊನಾ ಟೆಸ್ಟಿಂಗ್ ಲ್ಯಾಬ್ ಉದ್ಘಾಟಿಸಿ ಬಳಿಕ ಮಾತಮಾಡಿದ ಅವರು, ಕೊರೊನಾ ಸೋಂಕಿತರ ಸಂಖ್ಯೆ 5 ಲಕ್ಷಕ್ಕೆ ಏರಿಕೆಯಾಗುತ್ತಿರುವುದು ವಿರೋಧ ಪಕ್ಷದವರಿಗೆ ಮಾತ್ರವೇ ಕಾಣಿಸುತ್ತಿದೆ. ಆದರೆ, ನಾಲ್ಕು ಲಕ್ಷ ಸೋಂಕಿತರ ಗುಣಮುಖರಾಗಿದ್ದಾರೆ. ಈ ವಿಚಾರ ಮಾತ್ರ ಯಾಕೆ ವಿರೋಧ ಪಕ್ಷದವರಿಗೆ ತಿಳಿದಿಲ್ಲ ಎಂದು ಕೇಳಿದ್ದಾರೆ.
ಕೊರೊನಾ ನಿರ್ವಹಣೆಯಲ್ಲಿ ದೇಶದ ಒಟ್ಟು ಸಾವಿನ ಪ್ರಮಾಣ 1.64 ಇದ್ದು, ರಾಜ್ಯದಲ್ಲಿ 1.56 ರಷ್ಟಿದೆ. ಈ ಹಿನ್ನೆಲೆ ವಿರೋಧ ಪಕ್ಷದವರ ಹೇಳಿಕೆ ಆಧಾರ ರಹಿತ ಎಂದು ತಿಳಿಸಿದ್ದಾರೆ.
ವೆಂಟಿಲೇಟರ್ ಸಮಸ್ಯೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ವೆಂಟಿಲೇಟರ್ ಖರೀದಿ ಮಾಡುವುದಕ್ಕೆ ಗುಜರಾತ್ ಮತ್ತು ಹೈದರಾಬಾದ್ ಮೂಲದ ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಈ ಹಿನ್ನೆಲೆ ಮುಂಬರುವ ದಿನಗಳಲ್ಲಿ ಯಾವುದೇ ರೀತಿಯಾದ ಸಮಸ್ಯೆ ಆಗುವುದಿಲ್ಲ ಎಂದಿದ್ದಾರೆ.