ನವದೆಹಲಿ, ಸೆ. 19 (DaijiworldNews/MB) : ಸಾಂಕ್ರಾಮಿಕ ರೋಗಗಳ (ತಿದ್ದುಪಡಿ) ಮಸೂದೆ–2020ಕ್ಕೆ ರಾಜ್ಯ ಸಭೆಯು ಶನಿವಾರ ಅನುಮೋದನೆ ನೀಡಿದೆ. 1897ರ ಸಾಂಕ್ರಾಮಿಕ ರೋಗಗಳ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರವು ಈ ವರ್ಷದ ಏಪ್ರಿಲ್ನಲ್ಲಿ ಸುಗ್ರೀವಾಜ್ಞೆ ಹೊರಡಿಸಿತ್ತು.
ಶನಿವಾರ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಈ ಸಾಂಕ್ರಾಮಿಕ ರೋಗಗಳ (ತಿದ್ದುಪಡಿ) ಮಸೂದೆ–2020 ಅನ್ನು ರಾಜ್ಯಸಭೆಯಲ್ಲಿ ಮಂಡಿಸಿದ್ದು ಈ ಮಸೂದೆಗೆ ಅಂಗೀಕಾರ ದೊರೆತಿದೆ.
ಈ ಮಸೂದೆ ತಿದ್ದುಪಡಿ ಪ್ರಕಾರವಾಗಿ ಕೊರೊನಾ ವಾರಿಯರ್ಸ್ಗಳಾದ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುವವರನ್ನು ಗರಿಷ್ಠ ಐದು ವರ್ಷದವರೆಗೆ ಜೈಲು ಶಿಕ್ಷೆಗೆ ಒಳಪಡಿಸಬಹುದಾಗಿದೆ. ಆರೋಗ್ಯ ಕಾರ್ಯಕರ್ತರ ಮೇಲಿನ ಹಲ್ಲೆ ಪ್ರಕರಣಗಳ ತನಿಖೆಯ ಅಧಿಕಾರವನ್ನು ಇನ್ಸ್ಪೆಕ್ಟರ್ ದರ್ಜೆಯ ಅಧಿಕಾರಿಗೆ ನೀಡಲಾಗಿದೆ. ಅಧಿಕಾರಿ 30 ದಿನಗಳೊಳಗೆ ಇದರ ತನಿಖೆ ನಡೆಸಿ ಒಂದು ವರ್ಷದೊಳಗೆ ವಿಚಾರಣೆ ಮುಗಿಸಬೇಕು. ಕಾನೂನು ಉಲ್ಲಂಘನೆ ಸಾಬೀತಾದರೆ ಆರೋಪಿಗೆ ಕನಿಷ್ಠ ಮೂರು ತಿಂಗಳಿಂದ ಗರಿಷ್ಠ ಐದು ವರ್ಷದವರೆಗೆ ಜೈಲು ಶಿಕ್ಷೆ ಹಾಗೂ ₹50,000 ದಿಂದ ₹ 2 ಲಕ್ಷದವರೆಗೆ ದಂಡವನ್ನೂ ವಿಧಿಸಬಹುದು ಎಂದು ಈ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.