ಬೆಂಗಳೂರು, ಸೆ. 20 (DaijiworldNews/MB) : ಬಂಗಾಳಕೊಲ್ಲಿಯ ಈಶಾನ್ಯ ಭಾಗದಲ್ಲಿ ವಾಯುಭಾರ ಕುಸಿತದಿಂದಾಗಿ ಸೆಪ್ಟೆಂಬರ್ 20 ರಂದು ಗುಡುಗು ಸಹಿತ ಭಾರಿ ಮಳೆಯು ರಾಜ್ಯದಲ್ಲಿ ಸುರಿಯುವ ಸಾಧ್ಯತೆಯಿದ್ದು ಈ ಹಿನ್ನೆಲೆ ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಸೆಪ್ಟೆಂಬರ್ 20 ರಿಂದ ಸೆಪ್ಟೆಂಬರ್ 22 ರವರೆಗೆ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಸೆಪ್ಟೆಂಬರ್ 20 ಮತ್ತು ಸೆಪ್ಟೆಂಬರ್ 21 ರಂದು ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದ್ದುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ.
ಸೆಪ್ಟೆಂಬರ್ 20 ಮತ್ತು ಸೆಪ್ಟೆಂಬರ್ 21 ರಂದು ಬಾಗಲಕೋಟೆ, ಬೆಳಗಾವಿ, ಹಾವೇರಿ, ಧಾರವಾಡ, ಗದಗ, ಕೊಪ್ಪಳ, ಕಲಬುರ್ಗಿ ಮತ್ತು ಇತರ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಸುಮಾರು 55 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ರಾಯಚೂರು ಜಿಲ್ಲೆಯ ಗಬ್ಬೂರು ಹಾಗೂ ಮಂಗಳೂರು ವಿಮಾನ ನಿಲ್ದಾಣ ಪ್ರದೇಶದಲ್ಲಿ ಸೆಪ್ಟೆಂಬರ್ 19 ರ ಬೆಳಿಗ್ಗೆ 8.30 ರಿಂದ 24 ಗಂಟೆಗಳ ಅವಧಿಯಲ್ಲಿ ಅತೀ ಹೆಚ್ಚು ಅಂದರೆ ಎಂಟು ಸೆಂಟಿಮೀಟರ್ ಮಳೆಯಾಗಿದೆ. ಮಂಗಳೂರು, ಮಾಣಿ, ಪಣಂಬೂರಿನಲ್ಲಿ ತಲಾ ಏಳು ಸೆಂಟಿಮೀಟರ್ ಮಳೆಯಾಗಿದೆ. ಮೂಡಬಿದಿರೆ ಹಾಗೂ ಕೊಡಗಿನ ಭಾಗಮಂಡಲದಲ್ಲಿ ತಲಾ ಐದು ಸೆಂಟಿಮೀಟರ್ ಮಳೆಯಾಗಿದೆ.
ಉಡುಪಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸೆಪ್ಟೆಂಬರ್ 21 ಮತ್ತು ಸೆಪ್ಟೆಂಬರ್ 22 ರಂದು ಉಡುಪಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಿದೆ.
ಯಾವುದೇ ತುರ್ತು ಪರಿಸ್ಥಿತಿಗಾಗಿ, ನಾಗರಿಕರು ಟೋಲ್ ಫ್ರೀ ಸಂಖ್ಯೆ 1077 ಅಥವಾ 0820-2574802 ಗೆ ಸಹಾಯಕ್ಕಾಗಿ ಕರೆ ಮಾಡಬಹುದು. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡವನ್ನು ಒಳಗೊಂಡ ಕರಾವಳಿ ಪ್ರದೇಶದ ಸ್ಥಳೀಯ ಆಡಳಿತಗಳು ಪರಿಸ್ಥಿತಿಯನ್ನು ನಿಭಾಯಿಸಲು ಸಿದ್ಧರಾಗಿರುವಂತೆ ಸೂಚಿಸಿದೆ.