ಕೋಲ್ಕತಾ, ಸೆ. 20 (DaijiworldNews/MB) : ದೇಶದಲ್ಲಿ ಇತ್ತೀಚೆಗೆ ಭಾರೀ ಚರ್ಚೆಗೆ ಕಾರಣವಾಗಿರುವ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ ಹಾಗೂ ಮೋಹಕ ತಾರೆ ಶ್ರೀದೇವಿ ಸಾವು ಪ್ರಕರಣಗಳನ್ನು ವಿಶ್ವವಿದ್ಯಾಲಯವೊಂದು ತನ್ನ ಪಠ್ಯಕ್ರಮದಲ್ಲಿ ಅಳವಡಿಸಿದೆ.
ಪೂರ್ವ ಭಾರತದಲ್ಲಿರುವ ಏಕೈಕ ಸರ್ಕಾರಿ ಸಂಸ್ಥೆಯಾದ ಮೌಲಾನಾ ಅಬುಲ್ ಕಲಾಂ ಆಜಾದ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ (ಮಕಾಟ್)ಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ಗಳಲ್ಲಿ ವಿಧಿವಿಜ್ಞಾನ ವಿಷಯದ ಅಧ್ಯಯನ ನಡೆಸುವವರಿಗೆ ಸುಶಾಂತ್ ಸಿಂಗ್ ರಜಪೂತ್ ಮತ್ತು ಶ್ರೀದೇವಿ ಅವರ ಸಾವಿನ ಪ್ರಕರಣಗಳನ್ನು ಪಠ್ಯಕ್ರಮದಲ್ಲಿ ಅಳವಡಿಸಲಾಗಿದ್ದು ಇದನ್ನು ಕೇಸ್ ಸ್ಟಡಿಯನ್ನಾಗಿ ಪರಿಗಣಿಸಲಾಗಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ವಿಶ್ವವಿದ್ಯಾನಿಲಯದ ವಿಧಿವಿಜ್ಞಾನ ವಿಭಾಗದ ಪ್ರಾಧ್ಯಾಪಕ ಸುಜಯ್ ಮಿತ್ರ ಅವರು, ''ಘಟನೆಯ ಪುನರ್ ಸೃಷ್ಟಿ ಹಾಗೂ ತಾರ್ಕಿಕ ವಿವರಣಗಳೊಂದಿಗೆ ತೀರ್ಮಾನಕ್ಕೆ ಬರಲು ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ. ಪ್ರಸ್ತುತ ಸೈಬರ್ ವಲ್ಡ್ನಿಂದ ದಾಳಿಕೋರರು ನುಸುಳುತ್ತಿದ್ದಾರೆ. ಈಗ ಒಂದು ವಿಷಯದಲ್ಲಿ ಓರ್ವ ವ್ಯಕ್ತಿಯ ಪ್ರತಿಕ್ರಿಯೆ ಹಿಂದಿಗಿಂತ ಬಹಳ ಬದಲಾಗಿದೆ. ನಾವು 20 ವರ್ಷಗಳ ಹಿಂದೆ ಏನೂ ಸಮಸ್ಯೆಗಳು ಇದ್ದರೂ ಅದನ್ನು ನಿರ್ಲಕ್ಯ್ಷ ಮಾಡುತ್ತಿದ್ದೆವು. ಆದರೆ ಈಗ ಹಾಗಲ್ಲ ಅದೇ ಸಮಸ್ಯೆ ಖಿನ್ನತೆಗೆ ಕಾರಣವಾಗುತ್ತದೆ. ಆ ನಿಟ್ಟಿನಲ್ಲಿ ಈ ಸಾವು ಪ್ರಕರಣಗಳನ್ನು ಕೇಸ್ ಸ್ಟಡಿ ಮಾಡಲಾಗುತ್ತದೆ'' ಎಂದು ತಿಳಿಸಿದ್ದಾರೆ.