ಬೆಂಗಳೂರು, ಸೆ. 20 (DaijiworldNews/MB) : ''ನೀವೆಂತ ಸ್ವಾರ್ಥಿ, ಎಡಬಿಡಂಗಿತನದ ರಾಜಕಾರಣಿ ಎಂದು ಇಡೀ ನಾಡಿಗೆ ಗೊತ್ತಿದೆ. ಆತ್ಮವಂಚನೆಯ ರಾಜಕಾರಣಿಯಿಂದ ಜೆಡಿಎಸ್ ಕಲಿಯುವುದು ಏನೇನೂ ಇಲ್ಲ'' ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿರುದ್ದ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.
ಸಿದ್ದರಾಮಯ್ಯ ಅವರು ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಅವರ ಕಾಂಗ್ರೆಸ್ ಸೇರ್ಪಡೆ ಸಮಾರಂಭದಲ್ಲಿ ಆಡಿದ್ದ ಮಾತುಗಳಿಗೆ ಪ್ರತಿಕ್ರಿಯೆ ನೀಡಿ ಭಾನುವಾರ ಸರಣಿ ಟ್ವೀಟ್ಗಳನ್ನು ಮಾಡಿರುವ ಹೆಚ್ಡಿಕೆ ಅವರು, ''ಅಧಿಕಾರದ ಲಾಲಸೆಯಿಂದ ಕಾಂಗ್ರೆಸ್ ಗೆ ಜಿಗಿದ ಸಿದ್ದರಾಮಯ್ಯ ಅವರು 'ಜೆಡಿಎಸ್ ಅವಕಾಶವಾದಿ ಪಕ್ಷ' ಎನ್ನುವ ಮೂಲಕ ತಮ್ಮ ಊಸರವಳ್ಳಿ ರಾಜಕಾರಣದ ನಿಜಬಣ್ಣ ಬಯಲು ಮಾಡಿಕೊಂಡಿದ್ದಾರೆ'' ಎಂದು ಸಿದ್ದರಾಮಯ್ಯ ವಿರುದ್ದ ಹರಿಹಾಯ್ದಿದ್ದಾರೆ.
''ಜೆಡಿಎಸ್ ಪಕ್ಷದಲ್ಲಿದ್ದಾಗ ಅಧಿಕಾರ, ಸ್ಥಾನ-ಮಾನಗಳನ್ನು ಅನುಭವಿಸಿ ತಮ್ಮ ಬೆಂಬಲಿಗರೊಂದಿಗೆ ಗಂಟು ಮೂಟೆ ಕಟ್ಟಿಕೊಂಡು ಅಧಿಕಾರದ ಆಸೆಗಾಗಿ, ಅವಕಾಶವಾದಿ ಹಾದಿ ಹಿಡಿದ ಕೃತಘ್ನಗೇಡಿತನದ ಸಿದ್ದರಾಮಯ್ಯ ಅವರಿಂದ ನಮ್ಮ ಪಕ್ಷ ಸ್ವಾಭಿಮಾನದ ಪಾಠ ಕಲಿಯಬೇಕಿಲ್ಲ'' ಎಂದು ಹೇಳಿರುವ ಅವರು, ''ನಿಮ್ಮ ಸ್ವಾಭಿಮಾನದ ಪ್ರಲಾಪ ಮಠದೊಳಗಿನ ಬೆಕ್ಕಿನ ಮುಖವಾಡದಂತಿದೆ'' ಎಂದು ಲೇವಡಿ ಮಾಡಿದ್ದಾರೆ.
''ಕಾಂಗ್ರೆಸ್ ಮುಖ್ಯಮಂತ್ರಿಯಾಗಿದ್ದಾಗಲೇ ಬಹಿರಂಗವಾಗಿ ಕಾಂಗ್ರೆಸ್ ಪಕ್ಷ ನಿರ್ನಾಮವಾಗಬೇಕು. ಇದನ್ನು ಬುಡಸಹಿತ ಕಿತ್ತೊಗೆಯಬೇಕು ಎಂದು ಬಹಿರಂಗವಾಗಿ ಅಂತರಂಗದ ಮಾತನ್ನು ಉದ್ಗರಿಸಿದ್ದ ನೀವು ಎಂತಹ ಸ್ವಾರ್ಥಿ ಮತ್ತು ಎಡಬಿಡಂಗಿತನದ ರಾಜಕಾರಣಿ ಎಂಬುದು ಇಡೀ ನಾಡಿಗೆ ಗೊತ್ತಿದೆ'' ಎಂದು ವ್ಯಂಗ್ಯ ಮಾಡಿದ್ದಾರೆ.
''ಅಧಿಕಾರದ ನಿರ್ಮೋಹ, ಸ್ವಾಭಿಮಾನಕ್ಕೆ ಕಟ್ಟುಬಿದ್ದು ದೇವೇಗೌಡರು ಪ್ರಧಾನಿ ಹುದ್ದೆಯನ್ನೇ ತ್ಯಜಿಸಿ ಬಂದರು. ಅಧಿಕಾರ ಉಳಿಸಿಕೊಳ್ಳಬೇಕೆಂದಿದ್ದರೆ ಪ್ರಧಾನಿಯಾಗಿ ಮುಂದುವರಿಯಬಹುದಿತ್ತು. ದೇವೇಗೌಡರ ಈ ಸ್ವಾಭಿಮಾನಿ ರಾಜಕಾರಣವನ್ನು ಇಷ್ಟು ಬೇಗ ಮರೆತು ಬಿಟ್ಟಿರಾ? ಆತ್ಮವಂಚನೆಯ ರಾಜಕಾರಣಿಯಿಂದ ಜೆಡಿಎಸ್ ಕಲಿಯುವುದು ಏನೇನೂ ಇಲ್ಲ'' ಎಂದು ತಿರುಗೇಟು ನೀಡಿದ್ದಾರೆ.
''ಜೆಡಿಎಸ್ ಪಕ್ಷ ಅಧಿಕಾರದಲ್ಲಿ ಇದ್ದಾಗಲೆಲ್ಲಾ ಜನರ ಕಷ್ಟಕಾರ್ಪಣ್ಯಗಳು, ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದೆ. ಅಧಿಕಾರದ ಮದ ಮತ್ತು ದುರಹಂಕಾರವನ್ನು ಎಂದೂ ಪ್ರದರ್ಶನ ಮಾಡಿಲ್ಲ. ಅಧಿಕಾರದ ಅಲ್ಪಾವಧಿಯಲ್ಲೂ ಜನಕಲ್ಯಾಣ ಪಕ್ಷದ ಹೆಗ್ಗುರುತಾಗಿತ್ತು'' ಎಂದು ಹೇಳಿದ್ದಾರೆ.
''ಪಕ್ಷಾಂತರ ಮಾಡಿ ಅಧಿಕಾರ ಹಿಡಿದ ನೀವು ಆ ಪಕ್ಷದಲ್ಲಿ ಬಿತ್ತಿದ ಬೆಳೆ ಮತ್ತು ಕಳೆ ಏನೆಂಬುದನ್ನು ನಿಮ್ಮನ್ನು ಆಲಿಂಗಿಸಿಕೊಂಡ ಪಕ್ಷದವರು ಈಗ ಅನುಭವಿಸುತ್ತಿದ್ದಾರೆ. ನಿಮ್ಮ ಸ್ವಾರ್ಥ ರಾಜಕಾರಣದ ಕುಟಿಲ ತಂತ್ರಗಳನ್ನು ಮರೆಮಾಚಿಕೊಳ್ಳಲು ಬೆಳೆದ ಪಕ್ಷಕ್ಕೆ ಮಗ್ಗುಲಲ್ಲಿ ಇದ್ದು ಬಾಕು ಹಾಕಿದವರ ಮಾರ್ಜಾಲ ಉಪದೇಶ ಯಾರಿಗೆ ಸಹ್ಯವಾದೀತು?'' ಎಂದು ಪ್ರಶ್ನಿಸಿದ್ದಾರೆ.