ನವದೆಹಲಿ,ಸೆ.20 (DaijiworldNews/HR): ದೇಶದಾದ್ಯಂತ ಕಳೆದ ಹತ್ತು ವರ್ಷಗಳಲ್ಲಿ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ 631 ವ್ಯಕ್ತಿಗಳು ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ ತಿಳಿಸಿದೆ.
ಈ ಹತ್ತು ವರ್ಷಗಳಲ್ಲಿ ತಮಿಳುನಾಡಿನಲ್ಲಿ 122 ಮಂದಿ ಸಾವನ್ನಪ್ಪಿದ್ದು, ಇದು ಈ ದಶಕದಲ್ಲಿ ಅತಿ ಹೆಚ್ಚು ಸಫಾಯಿ ಕರ್ಮಚಾರಿಗಳು ಸಾವಿಗೀಡಾಗಿರುವ ರಾಜ್ಯವಾಗಿದೆ. ಉಳಿದಂತೆ ಉತ್ತರ ಪ್ರದೇಶದಲ್ಲಿ 85, ದೆಹಲಿ ಮತ್ತು ಕರ್ನಾಟಕದಲ್ಲಿ ತಲಾ 63 ಮತ್ತು ಗುಜರಾತ್ನಲ್ಲಿ 61 ಮಂದಿ ಸಾವನ್ನಪ್ಪಿದ್ದಾರೆ. ಹರಿಯಾಣದಲ್ಲಿ 50 ಸಾವಿನ ಪ್ರಕರಣಗಳು ವರದಿಯಾಗಿವೆ. ಪ್ರಸಕ್ತ ವರ್ಷ, ಮಾರ್ಚ್ 31ರವರೆಗಿನ ಮಾಹಿತಿ ಪ್ರಕಾರ ಇಬ್ಬರು ಸಾವನ್ನಪ್ಪಿದ್ದಾರೆ.
ಸಫಾಯಿ ಕರ್ಮಚಾರಿ ಆಂದೋಲನದ ರಾಷ್ಟ್ರೀಯ ಕನ್ವೀನರ್ ಬೆಜವಾಡ ವಿಲ್ಸನ್, ಮಲಹೊರುವ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ ಅನುಷ್ಠಾನ ಮಾಡದಿರುವುದರಿಂದ ಪೌರಕಾರ್ಮಿಕರು ಇಂಥ ಸಂಕಷ್ಟದಲ್ಲಿ ಸಿಲುಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.