ಬೆಂಗಳೂರು, ಸೆ. 20 (DaijiworldNews/MB) : ''ಭ್ರಷ್ಟಾಚಾರ ವಿಚಾರದಲ್ಲಿ ಪೇಚಿಗೆ ಸಿಲುಕುವ ಭೀತಿಯಿಂದಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮೂರೇ ದಿನದಲ್ಲಿ ಸದನ ಮೊಟಕುಗೊಳಿಸಲು ನಿರ್ಧಾರಿಸಿದ್ದಾರೆ'' ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಆರೋಪಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಡಿಕೆಶಿ ಅವರು, ''ಸಿಎಂ ನನಗೆ ಹಾಗೂ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಕೊರೊನಾ ಕಾರಣದಿಂದಾಗಿ ಮೂರು ದಿನದಲ್ಲೇ ಸದನ ಮೊಟಕು ಮಾಡುತ್ತೇವೆ ಸಹಕಾರ ನೀಡಿ ಎಂದು ಮನವಿ ಮಾಡಿದ್ದಾರೆ. ಆದರೆ ನಾವು ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ'' ಎಂದು ಹೇಳಿದ್ದಾರೆ.
''ಬಿಜೆಪಿ ಸರ್ಕಾರವು ದೇಶದಲ್ಲಿ ಪ್ರಜಾಪ್ರಭುತ್ವವನ್ನೇ ಕೊನೆಗಾಣಿಸುವ ದಾರಿಯಲ್ಲಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಉಂಟಾಗಿರುವ ನೆರೆ, ಕಾನೂನು ಸುವ್ಯವಸ್ಥೆ, ನೆರೆ ಪರಿಹಾರ, ಕೇಂದ್ರ ಸರ್ಕಾರ ನೀಡದಿರುವ ಪರಿಹಾರದ ಮೊತ್ತ ಇವೆಲ್ಲದರ ಬಗ್ಗೆ ಚರ್ಚೆ ನಡೆಸಬೇಕಾಗಿದೆ. ಆದರೆ ಇವರೀಗ ಕೊರೊನಾ ನೆಪ ಹೇಳಿ ಸದನವನ್ನು ಮೂರೇ ದಿನಕ್ಕೆ ಮೊಟಕು ಮಾಡಲು ಮುಂದಾಗಿದ್ದಾರೆ. ಇವರಿಗೇನು ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆಯೇ'' ಎಂದು ಪ್ರಶ್ನಿಸಿದ್ದು, ''ಸರ್ಕಾರದ ಎಲ್ಲಾ ಭ್ರಷ್ಟಾಚಾರಗಳ ಬಗ್ಗೆ ಚರ್ಚೆ ನಡೆಯುತ್ತೆ, ಇದರಿಂದಾಗಿ ಸಿಕ್ಕಿಹಾಕಿಕೊಳ್ಳುತ್ತೇವೆ ಎಂಬ ಭಯದಿಂದ ಸದನವನ್ನು ಮೊಟಕು ಮಾಡಲು ಮುಂದಾಗಿದ್ದಾರೆ. ಆದರೆ ನಾವು ಇದ್ದಕ್ಕೆ ಅವಕಾಶ ನೀಡುವುದಿಲ್ಲ'' ಎಂದಿದ್ದಾರೆ.