ನವದೆಹಲಿ,ಸೆ.20 (DaijiworldNews/HR): ಜ್ಞಾನ, ಉದ್ಯಮ, ನಾವೀನ್ಯತೆ ಮತ್ತು ಕೌಶಲದ ಕೇಂದ್ರವಾಗಿ ಜಮ್ಮು ಮತ್ತು ಕಾಶ್ಮೀರವನ್ನು ಕಾಣುವ ಕನಸು ನನ್ನದು ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಹೇಳಿದ್ದಾರೆ.
ಈ ಬಗ್ಗೆ ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿದಂತೆ ಶ್ರೀನಗರದಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ವಿಡೀಯೊ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಅವರು, ಎನ್ಇಪಿಯನ್ನು ಜಾರಿಗೊಳಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರವನ್ನು ಜ್ಞಾನ, ಉದ್ಯಮ, ನಾವೀನ್ಯತೆ ಮತ್ತು ಕಲಿಕೆಯ ಸ್ವರ್ಗವನ್ನಾಗಿಸುವ ದೃಢ ನಿಶ್ಚಯಗಳನ್ನು ಮಾಡಬೇಕಾಗಿದೆ. ಈ ಕ್ರಮಗಳು ಮಧ್ಯಕಾಲೀನ ಯುಗದಲ್ಲಿ ಉಲ್ಲೇಖಿಸಲಾಗಿರುವಂತೆ ಜಮ್ಮ ಕಾಶ್ಮೀರವನ್ನು ಮತ್ತೊಮ್ಮೆ ಭೂಮಿ ಮೇಲಿನ ಸ್ವರ್ಗ, ಭಾರತ ಮಾತೆಯ ಕಿರೀಟದ ಮೇಲಿನ ಪ್ರಕಾಶಮಾನವಾದ ಆಭರಣವನ್ನಾಗಿ ಮಾಡುತ್ತವೆ ಎಂದು ಹೇಳಿದ್ದಾರೆ.
ಹೊಸ ಶಿಕ್ಷಣ ನೀತಿಯ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದ ಅವರು, ಭಾರತವು ಅಪಾರ ಜನಸಂಖ್ಯೆಯನ್ನು ಹೊಂದಿದೆ. ಆದರೆ, ಹೆಚ್ಚಿನ ಸಂಖ್ಯೆಯಲ್ಲಿರುವ ಯುವಕರು ಕೌಶಲ್ಯ, ವೃತ್ತಿಪರವಾಗಿ ಸಮರ್ಥರಾಗಿದ್ದರೆ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ನಿಜವಾದ ಶಿಕ್ಷಣ ಪಡೆದರೆ ಮಾತ್ರ ಅದನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳಬಹುದಾಗಿದೆ ಎಂದಿದ್ದಾರೆ.
ನಮ್ಮ ಸಂಪ್ರದಾಯ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಅದು ನಮ್ಮ ಮಾತೃಭಾಷೆಯಿಂದಷ್ಟೇ ಸಾಧ್ಯವಾಗಲಿದೆ. ದೇಶದ ಸಾಂಸ್ಕೃತಿಕ ನೀತಿಗೆ ಬದ್ಧವಾಗಿರುವ ಮಾತೃಭಾಷೆಯನ್ನು ಹೊಸ ಶಿಕ್ಷಣ ನೀತಿಯಲ್ಲಿ ಪ್ರೋತ್ಸಾಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.