ಲಖನೌ,ಸೆ.20 (DaijiworldNews/HR): ದುಷ್ಟ ಪತಿಯೋರ್ವ ಹುಟ್ಟುವ ಮಗು ಗಂಡೋ ಹೆಣ್ಣೋ ಎಂದು ತಿಳಿಯಲು ತನ್ನ ಗರ್ಭಿಣಿ ಪತ್ನಿಯ ಹೊಟ್ಟೆ ಸೀಳಿರುವ ಘಟನೆ ಉತ್ತರ ಪ್ರದೇಶದ ಬುಡಾನ್ ಜಿಲ್ಲೆಯ ನೇಕ್ಪುರ್ ನಲ್ಲಿ ನಡೆದಿದೆ.
ಗಂಡು ಮಗು ಬೇಕು ಎಂದು ಪರಿತಪಿಸುತ್ತಿದ್ದ ಪತಿ ತನ್ನ ಪತ್ನಿಗೆ ಹುಟ್ಟಲಿರುವ ಮಗುವಿನ ಲಿಂಗ ತಿಳಿಯಲು ಪತ್ನಿಯ ಗರ್ಭವನ್ನೇ ಚಾಕುವಿನಿಂದ ಸೀಳಿದ್ದಾನೆ. ನೇಕ್ಪುರ್ ನಿವಾಸಿ ಪನ್ನಾಲಾಲ್ ಎಂಬಾತ ಈ ಕೃತ್ಯವೆಸಗಿದ್ದು, ಪ್ರಸ್ತುತ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಪನ್ನಲಾಲ್ ಮತ್ತುಆತನ ಪತ್ನಿಗೆ ಈ ಹಿಂದೆ 5 ಹೆಣ್ಣಮಕ್ಕಳು ಜನಿಸಿದ್ದು, ದಂಪತಿ ಆರನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಈ ಹಿಂದೆ ಸತತ 5 ಹೆಣ್ಣು ಮಕ್ಕಳಾದ್ದರಿಂದ ಪನ್ನಲಾಲ್ ಹುಟ್ಟಲಿರುವ ಮಗುವಿನ ಲಿಂಗ ತಿಳಿಯಲು ಇಚ್ಛಿಸಿದ್ದ. ಹೀಗಾಗಿ ತನ್ನ 35 ವರ್ಷದ 7 ತಿಂಗಳ ಗರ್ಭಿಣಿ ಹೊಟ್ಟೆಯನ್ನು ಚೂಪಾದ ಸಾಧನದಿಂದ ಸೀಳಿದ್ದಾನೆ. ತೀವ್ರ ರಕ್ತ ಸ್ರಾವದಲ್ಲಿ ಸಾವು-ನೋವು ನಡುವೆ ಒದ್ದಾಡುತ್ತಿದ್ದ ಮಹಿಳೆಯನ್ನು ಬರೇಲಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಕೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ ಎಂದು ತಿಳಿದು ಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪನ್ನಾಲಾಲ್ ನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.