ನವದೆಹಲಿ, ಸೆ.20 (DaijiworldNews/HR): ಕೃಷಿಗೆ ಸಂಬಂಧಿಸಿದ ಎರಡು ಪ್ರಮುಖ ಮಸೂದೆಗಳು ಇಂದು ಅಂಗೀಕಾರಗೊಂಡ ನಂತರ ರೈತರನ್ನು ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ಕೃಷಿ ಇತಿಹಾಸದಲ್ಲಿ ಇದೊಂದು ದೊಡ್ಡ ತಿರುವು ಎಂದಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಭವಿಷ್ಯದ ಪೀಳಿಗೆಗಾಗಿ ಕೇಂದ್ರ ಸರ್ಕಾರವು ರೈತರಿಗೆ ಸೇವೆ ಸಲ್ಲಿಸಲು ಮತ್ತು ಬಲಿಷ್ಠವಾದ ಕೃಷಿ ಉದ್ಯಮವನ್ನು ನಿರ್ಮಿಸಲು ಉದ್ದೇಶಿಸಿದೆ. ನಮ್ಮ ಕೃಷಿ ಕ್ಷೇತ್ರಕ್ಕೆ ಇತ್ತೀಚಿನ ತಂತ್ರಜ್ಞಾನದ ನೆರವು ಅಗತ್ಯವಿದ್ದು, ಅದು ಕಷ್ಟಪಟ್ಟು ದುಡಿಯುವ ರೈತರಿಗೆ ಸಹಾಯ ಮಾಡುತ್ತದೆ. ಮಸೂದೆಗಳ ಅಂಗೀಕಾರದೊಂದಿಗೆ ಈಗ, ಭವಿಷ್ಯದ ತಂತ್ರಜ್ಞಾನದೆಡೆಗೆ ಸುಲಭವಾಗಿ ಪ್ರವೇಶ ಪಡೆಯುವಂತಾಗಿದ್ದು, ಆದರಿಂದ ಉತ್ಪಾದನೆ ಹೆಚ್ಚುತ್ತದೆ ಮತ್ತು ಉತ್ತಮ ಫಲಿತಾಂಶವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಭಾರತೀಯ ರೈತರು ದಶಕಗಳಿಂದಲೂ ವಿವಿಧ ನಿರ್ಬಂಧಗಳಿಂದ ಬಂಧಿಸಲ್ಪಟ್ಟಿದ್ದಾರೆ ಮತ್ತು ಮಧ್ಯವರ್ತಿಗಳಿಂದ ಬೆದರಿಕೆಗೊಳಗಾಗಿದ್ದಾರೆ. ಇಂದು ಸಂಸತ್ತು ಅಂಗೀಕರಿಸಿರುವ ಮಸೂದೆಗಳು ರೈತರನ್ನು ಇಂತಹ ತೊಂದರೆಗಳಿಂದ ಮುಕ್ತಗೊಳಿಸುತ್ತವೆ. ಈ ಮಸೂದೆಗಳು ರೈತರ ಆದಾಯವನ್ನು ದ್ವಿಗುಣಗೊಳಿಸುವ ಮತ್ತು ಅವರಿಗೆ ಹೆಚ್ಚಿನ ಸಮೃದ್ಧಿಯನ್ನು ನೀಡುವ ಪ್ರಯತ್ನಗಳಿಗೆ ನೆರವಾಗುತ್ತವೆ ಎಂಬುದಾಗಿ ತಿಳಿಸಿದ್ದಾರೆ.