ಬೆಂಗಳೂರು, ಸೆ. 21 (DaijiworldNews/MB) : ಕೊರೊನಾ ಕಾರಣದಿಂದಾಗಿ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಸೋಮವಾರದಿಂದ ವಿಧಾನಮಂಡಲದ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದು ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಹಲವು ವಿಚಾರಗಳಲ್ಲಿ ತರಾಟೆಗೆ ತೆಗೆದುಕೊಳ್ಳಲು ವಿರೋಧ ಪಕ್ಷಗಳು ಸಿದ್ದವಾಗಿದೆ.
ಹಲವು ಸಂಸದರು, ಶಾಸಕರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಒಟ್ಟು ಎಂಟು ದಿನಗಳ ಕಾಲ ನಡೆಯಲಿರುವ ಈ ಅಧಿವೇಶವನ್ನು ಮೂರೇ ದಿನದಲ್ಲಿ ಮೊಟಕುಗೊಳಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಹೇಳಲಾಗಿದ್ದು ಈ ಬಗ್ಗೆ ಭಾನುವಾರ ಪ್ರತಿಕ್ರಿಯೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಬಿ ಎಸ್ ಯಡಿಯೂರಪ್ಪನವರು ನನಗೆ ಹಾಗೂ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಕೊರೊನಾ ಕಾರಣದಿಂದಾಗಿ ಮೂರು ದಿನದಲ್ಲೇ ಸದನ ಮೊಟಕು ಮಾಡುತ್ತೇವೆ ಸಹಕಾರ ನೀಡಿ ಎಂದು ಮನವಿ ಮಾಡಿದ್ದಾರೆ. ಆದರೆ ನಾವು ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಭ್ರಷ್ಟಾಚಾರ ವಿಚಾರದಲ್ಲಿ ಪೇಚಿಗೆ ಸಿಲುಕುವ ಭೀತಿಯಿಂದಾಗಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮೂರೇ ದಿನದಲ್ಲಿ ಸದನ ಮೊಟಕುಗೊಳಿಸಲು ನಿರ್ಧಾರಿಸಿದ್ದಾರೆ ಎಂದು ಹೇಳಿದ್ದರು.
ಡಿ ಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಇದು ಮೊದಲ ಅಧಿವೇಶನವಾಗಿದ್ದು ಕಾಂಗ್ರೆಸ್ ಆಡಳಿತ ಪಕ್ಷವನ್ನು ಪೇಚಿಗೆ ಸಿಲುಕಿಸಲು ಸಜ್ಜಾಗಿದೆ. ಡ್ರಗ್ಸ್ ಮಾಫಿಯಾ, ಡಿ ಜೆ ಹಳ್ಳಿ ಪ್ರಕರಣ, ನೆರೆ ಪ್ರದೇಶಗಳಲ್ಲಿ ಪರಿಹಾರ ವಿತರಣೆ, ಕೊರೊನಾ ನಿರ್ವಹಣೆ ಇವೆಲ್ಲಾ ವಿಷಯಗಳು ವಿರೋಧ ಪಕ್ಷಗಳ ಅಸ್ತ್ರವಾಗಿದೆ. ವಿರೋಧ ಪಕ್ಷಗಳ ಪ್ರಶ್ನೆಗೆ ಉತ್ತರಿಸಲು ಬಿಜೆಪಿ ಸರ್ಕಾರವು ಕೂಡಾ ಸಜ್ಜಾಗಿದೆ.
ಇನ್ನು ಈ ಅಧಿವೇಶನದಲ್ಲಿ 19 ಸುಗ್ರೀವಾಜ್ಞೆಗಳೂ ಸೇರಿ ಒಟ್ಟು 31 ಮಸೂದೆ ಗಳು ಮಂಡನೆಯಾಗಲಿವೆ. ಈಗಾಗಲೇ ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ತಿದ್ದುಪಡಿ ಸುಗ್ರೀವಾಜ್ಞೆ (ಎಪಿಎಂಸಿ) ಮತ್ತು ಕರ್ನಾಟಕ ಭೂಸುಧಾರಣೆ ತಿದ್ದುಪಡಿ ಸುಗ್ರೀವಾಜ್ಞೆಗಳ ಬಗ್ಗೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು ಈ ಮಸೂದೆಯ ಬಗ್ಗೆ ಸದನದಲ್ಲಿ ಗದ್ದಲ ಉಂಟಾಗುವ ಸಾಧ್ಯತೆಯಿದೆ.
ಇನ್ನು ಕೊರೊನಾ ಕಾರಣದಿಂದಾಗಿ ಅಧಿವೇಶನಕ್ಕೆ ಆರು ಸಚಿವರು, ಮತ್ತು 10ಕ್ಕೂ ಅಧಿಕ ಶಾಸಕರು ಗೈರಾಗುವುದು ಈಗಾಗಲೇ ಖಚಿತವಾಗಿದೆ. ಕೊರೊನಾ ಸೋಂಕು ದೃಢಪಟ್ಟ ಕಾರಣದಿಂದಾಗಿ ಡಿಸಿಎಂ ಡಾ.ಸಿ.ಎನ್. ಅಶ್ವತ್ಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಆಹಾರ ಸಚಿವ ಕೆ. ಗೋಪಾಲಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ, ಶಾಸಕರುಗಳಾದ ಎನ್.ಎ. ಹ್ಯಾರಿಸ್, ಎಚ್.ಪಿ. ಮಂಜುನಾಥ್, ಕೆ. , ಮಹದೇವ್ ಬಿ. ನಾರಾಯಣ ರಾವ್, ಡಿ.ಎಸ್.ಹುಲಗೇರಿ, ಬಸನಗೌಡ ದದ್ದಲ, ವೆಂಕಟರಾವ್ ನಾಡಗೌಡ, ಪ್ರಿಯಾಂಕ್ ಖರ್ಗೆ, ಉಮಾನಾಥ ಕೋಟ್ಯಾನ್, ಡಿ.ಸಿ.ಗೌರಿಶಂಕರ್, ಎಚ್.ಕೆ. ಕುಮಾರಸ್ವಾಮಿ, ಕುಸುಮಾವತಿ ಶಿವಳ್ಳಿ ಅವರು ಗೈರಾಗಲಿದ್ದಾರೆ ಎಂದು ವರದಿಯಾಗಿದೆ.