ನವದೆಹಲಿ, ಸೆ. 21 (DaijiworldNews/MB) : ರಾಜ್ಯಸಭೆಯಲ್ಲಿ ಕೃಷಿ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು ಗದ್ದಲ ಉಂಟಾಗಿದೆ. ಈ ಸಂಬಂಧ ರಾಜ್ಯಸಭೆ ಅಧ್ಯಕ್ಷ ವೆಂಕಯ್ಯನಾಯ್ಡು ಅವರು 8 ಮಂದಿ ರಾಜ್ಯಸಭಾ ಸದಸ್ಯರನ್ನು ಒಂದು ವಾರಗಳ ಕಾಲ ಅಮಾನತು ಮಾಡಿದ್ದಾರೆ.
''ಭಾನುವಾರ ರಾಜ್ಯಸಭೆಯ ಕೆಲವು ಸದಸ್ಯರು ಸದನದ ಬಾವಿಗೆ ಇಳಿದು ಬಂದಿರುವುದು ಅನುಚಿತ ವರ್ತನೆ. ಉಪಾಧ್ಯಕ್ಷರಿಗೆ ಬೆದರಿಕೆ ಹಾಕಲಾಗಿದೆ. ಇದು ದುರದೃಷ್ಟಕರ ಮತ್ತು ಖಂಡನೀಯ. ಸಂಸದರಿಗೆ ದಯವಿಟ್ಟು ಸ್ವಲ್ಪ ಆತ್ಮಾವಲೋಕನ ಮಾಡಲು ಸೂಚಿಸುತ್ತೇನೆ. ಸದನದ ಎಂಟು ಸದಸ್ಯರನ್ನು ಒಂದು ವಾರ ಅಮಾನತು ಮಾಡಲಾಗಿದೆ'' ಎಂದು ರಾಜ್ಯಸಭೆ ಅಧ್ಯಕ್ಷ ವೆಂಕಯ್ಯನಾಯ್ಡು ಅವರು ತಿಳಿಸಿದ್ದಾರೆ.
''ರಾಜ್ಯಸಭಾ ಸದಸ್ಯರಾದ ಡೆರೆಕ್ ಒ ಬ್ರಿಯಾನ್, ಸಂಜಯ್ ಸಿಂಗ್, ರಾಜು ಸತವ್, ಕೆ.ಕೆ.ರಾಗೇಶ್, ರಿಪೂನ್ ಬೋರಾ, ಡೋಲಾ ಸೇನ್, ಸೈಯದ್ ನಜೀರ್ ಹುಸೇನ್ ಮತ್ತು ಎಲಮರನ್ ಕರೀಮ್ ಅವರನ್ನು ಒಂದು ವಾರ ಅಮಾನತುಗೊಳಿಸಲಾಗಿದೆ'' ಎಂದು ನಾಯ್ಡು ಹೇಳಿದ್ದಾರೆ.