ನವದೆಹಲಿ, ಸೆ 21(Daijiworld News/PY): ಪಾಂಗಾಗ್ ಸರೋವರ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಭಾರತೀಯ ಸೇನೆ ನಿಗಾವಹಿಸಿದೆ. ಅಲ್ಲದೇ, ಪೂರ್ವ ಲಡಾಖ್ ಗಡಿ ಪ್ರದೇಶದಲ್ಲಿ ಮುಖ್ಯವಾದ 20 ಪ್ರದೇಶಗಳಲ್ಲಿ ಸೇನೆಯು ತನ್ನ ಪ್ರಾಬಲ್ಯ ಹೆಚ್ಚಿಸಿದೆ ಎಂದು ಸರ್ಕಾರಿ ಮೂಲಗಳು ಮಾಹಿತಿ ನೀಡಿವೆ.
ಭಾರತ-ಚೀನಾ ಸೇನಾ ಕಮಾಂಡರ್ಗಳು ಗಡಿ ಬಿಕ್ಕಟ್ಟು ಕುರಿತಾಗಿ ಮಾತುಕತೆ ನಡೆಸಲಿದ್ದಾರೆ. ಏತನ್ಮಧ್ಯೆ ಚೀನಾಕ್ಕೆ ಪ್ರತ್ಯುತ್ತರ ನೀಡಲು ಯುದ್ದ ವಿಮಾನ ರಫೇಲ್ ಅನ್ನು ಲಡಾಖ್ ಪ್ರದೇಶದಲ್ಲಿ ಹಾರಾಟ ನಡೆಸಲು ವಾಯುಪಡೆ ತಯಾರಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವಾರ ವಿದೇಶಾಂಗ ಸಚಿವರಾದ ಎಸ್.ಜೈಶಂಕರ್ ಮತ್ತು ವಾಂಗ್ ಯಿ ಅವರು ಭಾರತ-ಚೀನಾದ ಗಡಿ ಬಿಕ್ಕಟ್ಟು ಶಮನಗೊಳಿಸುವ ಒಮ್ಮತಕ್ಕೆ ಬಂದಿದ್ದರು. ಈ ವೇಳೆ ಮಾತನಾಡಿದ ಎಸ್.ಜೈಶಂಕರ್ ಅವರು, ಗಡಿಯಲ್ಲಿನ ಸಂಘರ್ಷ ತಪ್ಪಿಸುವ ಸಲುವಾಗಿ ದ್ವಿಪಕ್ಷೀಯವಾದ ಎಲ್ಲಾ ಒಪ್ಪಂದಗಳಿಗೆ ಚೀನಾ ಕಟ್ಟುನಿಟ್ಟಾದ ಬದ್ದತೆ ತೋರಬೇಕು ಎಂದು ವಾಂಗ್ ಅವರಿಗೆ ತಿಳಿಸಿದ್ದರು.
ಇನ್ನು ಕಮಾಂಡರ್ ಮಟ್ಟದ ಮಾತುಕತೆಯ ಸಂದರ್ಭ, ಸೇನಾ ಪಡೆಗಳನ್ನು ವಾಪಾಸ್ಸು ಕರೆಸಿಕೊಳ್ಳುವುದು, ಗಡಿ ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಒಪ್ಪಂದಗಳಿಗೆ ಬದ್ದವಾಗಿರುವುದು. ಎಲ್ಎಸಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವ ಬಗ್ಗೆ ಒಮ್ಮತಕ್ಕೆ ಬರಲಾಗಿದ್ದು, ಈ ವಿಷಯವನ್ನು ಅನುಷ್ಠಾನಗೊಳಿಸುವ ಬಗ್ಗೆ ಮಾತುಕತೆ ನಡೆಯಲಿದೆ ಎನ್ನಲಾಗಿದೆ.