ನವದೆಹಲಿ, ಸೆ.21 (DaijiworldNews/HR): ಕೇಂದ್ರ ಸರ್ಕಾರವು ರಾಜ್ಯಸಭೆಯಲ್ಲಿ ಅಂಗೀಕರಿಸಿದ ಕೃಷಿ ಸಂಬಂಧಿತ ಮಸೂದೆಗಳು ದೇಶದ ರೈತರ ಪಾಲಿನ 'ಮರಣ ಶಾಸನ' ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್, ಕೇಂದ್ರ ಸರ್ಕಾರದ ಈ ತೀರ್ಮಾನವು ಪ್ರಜಾಪ್ರಭುತ್ವ ವ್ಯವಸ್ಥೆಯೇ ತಲೆ ತಗ್ಗಿಸುವಂತೆ ಮಾಡಿದೆ. ಮಣ್ಣಿನಿಂದ ಚಿನ್ನವನ್ನು ಬೆಳೆಯುವ ರೈತರನ್ನು ಮೋದಿ ಸರ್ಕಾರವು ಕಣ್ಣೀರು ಹಾಕಿಸಲು ಹೊರಟಿದೆ. ರಾಜ್ಯಸಭೆಯಲ್ಲಿ ಅಂಗೀಕರಿಸಿದ ಮಸೂದೆಯು ರೈತರ ಪಾಲಿನ ಮರಣ ಶಾಸನವಾಗಲಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ 'ಕಪ್ಪು ಕಾನೂನು' ಆಗಿದೆ. ಮೊದಲು ಪ್ರಧಾನಮಂತ್ರಿಯವರು ದೇಶದ ರೈತರನ್ನು ಬಂಡವಾಳಶಾಹಿಗಳ ಅಡಿಯಾಳು ಮಾಡುವುದಕ್ಕೆ ಹೊರಟಿದ್ದಾರೆ ಎಂಬುದಾಗಿ ದೂಷಿಸಿದ್ದಾರೆ.
ಇನ್ನು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿರುವ ರಾಹುಲ್ ಗಾಂಧಿ, ಎಪಿಎಂಸಿ ಮತ್ತು ಕಿಸಾನ್ ಮಾರುಕಟ್ಟೆಗಳಿಲ್ಲದೇ ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಸಿಗುವುದು ಹೇಗೆ. ರೈತರ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿಗೊಳಿಸುವುದಕ್ಕೆ ಏಕೆ ಸಾಧ್ಯವಿಲ್ಲ. ದೇಶದ ರೈತರನ್ನು ಬಂಡವಾಳಶಾಹಿಗಳ ಅಡಿಯಾಳು ಮಾಡುವುದಕ್ಕೆ ಹೊರಟಿದ್ದೀರಾ? ಎಂಬುದಾಗಿ ಪ್ರಶ್ನಿಸಿದ್ದಾರೆ.